October 7, 2026
WhatsApp Image 2026-10-07 at 1.34.55 PM

ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎರಡೂ ಬ್ಲಾಕ್‌ಗಳ ವಲಯಾಧ್ಯಕ್ಷರಿಗೆ ಭಾರತ್ ಜೋಡೋ ಸಂಘಗಳ ಸ್ಥಾಪನೆ ಹಾಗೂ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ವಹಿಸಿದ್ದರು.

ಸಭೆಯಲ್ಲಿ ಭಾರತ್ ಜೋಡೋ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಹಾಗೂ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಭಾಗವಹಿಸಿ, ಭಾರತ್ ಜೋಡೋ ಸಂಘಗಳ ಉದ್ದೇಶ, ರಚನೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಗ್ರಾಮೀಣ ಮಟ್ಟದಲ್ಲಿ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಿ, ಅವರ ಪ್ರತಿಭೆ, ಸಾಮರ್ಥ್ಯ ಹಾಗೂ ನಾಯಕತ್ವ ಗುಣಗಳನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುವ ಅಗತ್ಯವನ್ನು ಅವರು ವಿವರಿಸಿದರು.
ಭಾರತ್ ಜೋಡೋ ಸಂಘಗಳ ರಚನೆಗೆ ಸಂಬಂಧಿಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಇದೀಗ ಸ್ಥಗಿತಗೊಂಡಿದ್ದು, ಸಂಘಗಳ ಸ್ಥಾಪನೆ ಹಾಗೂ ನೋಂದಣಿಗೆ ಆಫ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿ ಗ್ರಾಮ, ಪಂಚಾಯಿತಿ ಹಾಗೂ ವಲಯ ಮಟ್ಟದಲ್ಲಿ ಯುವಜನರನ್ನು ಸಂಘಟಿಸುವಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿ
ಸಭೆಯಲ್ಲಿ ಚರ್ಚಿಸಿದರು.

ಯುವಜನರನ್ನು ಜಾತಿ–ಧರ್ಮದ ಭೇದಗಳನ್ನು ಮೀರಿ ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಾಮಾಜಿಕ ಸಾಮರಸ್ಯ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಕುರಿತು ಸಭೆಯಲ್ಲಿ ವಿಶೇಷವಾಗಿ ಗಮನ ಹರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೋಡ್ರೀಗಸ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಶೇಖರ ಜೈನ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಎಸ್. ಪೂಜಾರಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ, ಎರಡೂ ಬ್ಲಾಕ್‌ಗಳ ವಲಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಲಕೃಷ್ಣ ಅಂಚನ್ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ವಂದಿಸಿದರು.

About The Author

Leave a Reply