

ಉಡುಪಿ : ಜನಗಣತಿ (SIR) ಸರ್ವೇ ಹೆಸರಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 74 ವರ್ಷದ ವೃದ್ಧೆಯನ್ನು ಕೆಳಗೆ ತಳ್ಳಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ. ಉಡುಪಿ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ವಂಚನೆ ಹಾಗೂ ದರೋಡೆಗೆ ಒಳಗಾದ ವೃದ್ಧೆ.
ಶಾಂತ ಕಾರಂತ್ ಅವರು ನಿಟ್ಟೂರಿನ ಮನೆಯಲ್ಲಿ ಒಬ್ಬರೇ ಇದ್ದ ವೇಳೆ, ಅಕ್ಟೋಬರ್ 7 ರಂದು ಸಂಜೆ 3:47 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ತಾವು ಜನಗಣತಿ (SIR) ಕುರಿತು ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ಹೇಳಿ ಮಾತನಾಡಿಸಿದ್ದಾರೆ. ಈ ವೇಳೆ ಶಾಂತ ಕಾರಂತ್ ಅವರು, “ಮಗ ಬಂದ ಮೇಲೆ ಕೇಳಿ ಅವರು ತಂದ ಕಾಗದಕ್ಕೆ ಸಹಿ ಮಾಡುತ್ತೇನೆ” ಎಂದು ಹೇಳಿ ಮನೆಯೊಳಗೆ ತೆರಳಿದ್ದಾರೆ.
ಶಾಂತ ಕಾರಂತ್ ಅವರ ಹಿನ್ನಡೆಯನ್ನೇ ಕಾದಿದ್ದ ಅಪರಿಚಿತರು, ಏಕಾಏಕಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ. ಬಳಿಕ ವೃದ್ಧೆಯನ್ನು ಬಲವಾಗಿ ದೂಡಿ ಕೆಳಗೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೇಟ್ ಮಣಿ ಇರುವ ಬೆಲೆಬಾಳುವ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆ ಕುರಿತು ಶ್ರೀನಿವಾಸ ಕಾರಂತ್ ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026, ಬಿಎನ್‌ಎಸ್ (BNS) ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ.







