

ನವದೆಹಲಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ಆ್ಯಪ್ ಮೂಲಕ ₹16,000 ಪಾವತಿಸಿ ರಾತ್ರಿ ಇಡೀ ಆಡಿ ಕಾರನ್ನು ಬಾಡಿಗೆಗೆ ಪಡೆದಿದ್ದ 17 ವರ್ಷದ ಬಾಲಕನಿಂದ ಭೀಕರ ಅಪಘಾತ ಸಂಭವಿಸಿದೆ. ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಬಳಿಕ 45 ವರ್ಷದ ಪಾದಚಾರಿಯೊಬ್ಬರಿಗೆ ಗುದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಉಮಾಶಂಕರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾರನ್ನೂ ಜಪ್ತಿ ಮಾಡಿದ್ದಾರೆ.
ಕಾರು ಬಾಡಿಗೆ ಕಂಪನಿಯ ಪಾತ್ರದ ಬಗ್ಗೆಯೂ ತನಿಖೆ:

ಅಪ್ರಾಪ್ತ ವಯಸ್ಸನಿಗೆ ಕಾರು ಬಾಡಿಗೆಗೆ ನೀಡಿದ ಕಂಪನಿಯ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರು ಬುಕ್ ಮಾಡಿದ ಪ್ರಕ್ರಿಯೆ, ವಯಸ್ಸಿನ ಪರಿಶೀಲನೆ, ಚಾಲನಾ ಪರವಾನಗಿ ದೃಢೀಕರಣ ಹಾಗೂ ವಾಹನ ಹಸ್ತಾಂತರದ ವೇಳೆ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಕಂಪನಿಯಿಂದ ಮಾಹಿತಿ ಕೇಳಲಾಗಿದೆ. ವಯಸ್ಸು ಮತ್ತು ಚಾಲನಾ ಪರವಾನಗಿಯನ್ನು ಸರಿಯಾಗಿ ಪರಿಶೀಲಿಸದೆ ಕಾರು ನೀಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಆಡಿ ಕಾರಿನಲ್ಲಿದ್ದ ಇತರರ ಗುರುತು ಮತ್ತು ವಯಸ್ಸಿನ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪಘಾತದ ಅವಧಿಯಲ್ಲಿ ಕಾರನ್ನು ಬಾಲಕನೇ ನಿರಂತರವಾಗಿ ಚಲಾಯಿಸುತ್ತಿದ್ದನೇ ಅಥವಾ ಬೇರೆ ಯಾರಾದರೂ ಚಾಲನೆ ಮಾಡಿದ್ದರೇ ಎಂಬ ಅಂಶವನ್ನೂ ಪರಿಶೀಲಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಅಪ್ರಾಪ್ತನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.






