

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ಸಿಗೆ ಗಿಡುಗವೊಂದು ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗದ ವಿಂಡ್‌ಸ್ಕ್ರೀನ್ ಗಾಜು ಸಂಪೂರ್ಣ ಪುಡಿಯಾದ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿಯಲ್ಲಿ ನಡೆದಿದೆ. ಗಾಜು ಪುಡಿಯಾಗಿ ಚಾಲಕನ ಎದುರಿನ ದೃಷ್ಟಿಗೆ ಅಡ್ಡಿಯಾದರೂ, ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ.
ಮಂಗಳೂರಿನಿಂದ ಸಂಚರಿಸುತ್ತಿದ್ದ ಲಕ್ಷ್ಮಿ ಗಣೇಶ್ ಹೆಸರಿನ ಖಾಸಗಿ ಬಸ್ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್ ವೇಗವಾಗಿ ಚಲಿಸುತ್ತಿದ್ದ ವೇಳೆ ಎಲ್ಲಿಂದಲೋ ಹಾರಿಬಂದ ಗಿಡುಗ ನೇರವಾಗಿ ಚಾಲಕನ ಎದುರಿನ ಮುಂಭಾಗದ ಗಾಜಿಗೆ ರಭಸದಿಂದ ಬಡಿದಿದೆ. ಡಿಕ್ಕಿಯ ತೀವ್ರತೆಗೆ ಗಾಜು ಸಂಪೂರ್ಣವಾಗಿ ಪುಡಿಯಾಗಿ ಚೂರುಚೂರಾಗಿದೆ. ಏಕಾಏಕಿ ಗಾಜು ಪುಡಿಯಾದ ಪರಿಣಾಮ ಚಾಲಕ ಗಾಬರಿಗೊಳ್ಳುವ ಸಾಧ್ಯತೆಯಿದ್ದರೂ, ಚಾಲಕ ಹರೀಶ್ ಅವರು ವಿಚಲಿತರಾಗದೆ ತಕ್ಷಣ ಬಸ್ಸಿನ ನಿಯಂತ್ರಣ ಕಾಯ್ದುಕೊಂಡಿದ್ದಾರೆ. ಬಳಿಕ ಬಸ್ಸನ್ನು ಹೆದ್ದಾರಿಯ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.
ಚಾಲಕ ಹರೀಶ್ ಅವರ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯಲ್ಲಿ ಗಿಡುಗ ಡಿಕ್ಕಿಯಿಂದ ಬಸ್ಸಿನ ಮುಂಭಾಗದ ಗಾಜಿಗೆ ಭಾರಿ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.







