October 14, 2026
WhatsApp Image 2026-10-14 at 5.54.42 PM

ಬಳ್ಳಾರಿ : ಪತಿಯ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ ಘಟನೆ ಬಳ್ಳಾರಿ ನಗರದ ಅಲ್ಲಿಪುರ ಸಮೀಪದ ತುಂಗಭದ್ರಾ ಕಾಲುವೆ ಬಳಿ ನಡೆದಿದೆ. ಬಳ್ಳಾರಿ ನಗರದ ಮಿಲ್ಲರ್ ಪೇಟೆ ನಿವಾಸಿ ಲತೀಪಾ ಸಿಮ್ರಾನ್ (29) ಹಾಗೂ ಅವರ ಕಂದಮ್ಮಗಳಾದ ಮಹಮ್ಮದ್ ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಮೃತ ದುರ್ದೈವಿಗಳು.

ಸೋಮವಾರ ಸಂಜೆ ಲತೀಪಾ ಸಿಮ್ರಾನ್ ಅವರು ತಮ್ಮ ಇಬ್ಬರು ಮಕ್ಕಳನ್ನು ಒಂದೇ ವೇಲ್‌ಗೆ ಬಿಗಿಯಾಗಿ ಕಟ್ಟಿ ಕಾಲುವೆಗೆ ಎಸೆದಿದ್ದಾರೆ. ಇದರ ಬೆನ್ನಲ್ಲೇ ತಾವೂ ಅದೇ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಲತೀಪಾ ಸಿಮ್ರಾನ್ ಅವರ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ಕರ್ನಾಟಕದ ಗಡಿಭಾಗದ ನಾಗಲಾಪುರ ಬಳಿ ಇಬ್ಬರು ಹಸುಗೂಸುಗಳ ಮೃತದೇಹಗಳು ಕೂಡ ಪತ್ತೆಯಾಗಿವೆ.

ಲತೀಪಾ ಸಿಮ್ರಾನ್ ಅವರ ಸಾವಿಗೆ ಆಕೆಯ ಪತಿ ಸದ್ದಾಂ ಹುಸೇನ್‌ನ ದೈಹಿಕ ಹಾಗೂ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. ಪತಿ ಸದ್ದಾಂ ಹುಸೇನ್ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿ, ನಿತ್ಯ ಹಲ್ಲೆ ನಡೆಸುತ್ತಿದ್ದನು. “ತಾನು ಸತ್ತ ಬಳಿಕ ಮಕ್ಕಳು ಕೂಡ ಅನಾಥರಾಗಿ ತೊಂದರೆ ಅನುಭವಿಸಬಾರದು” ಎಂಬ ತೀವ್ರ ಆತಂಕ ಹಾಗೂ ನೊಂದ ಮನಸ್ಸಿನಿಂದಲೇ ತಾಯಿ ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಸದ್ದಾಂ ಹುಸೇನ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಪ್ರಚೋದನಾತ್ಮಕ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply