October 24, 2026
WhatsApp Image 2026-10-24 at 12.33.44 PM

ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ನೀಡಿದ ದೂರಿನಂತೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಆರೋಪಿಯಾಗಿದ್ದಾನೆ. ಮೃತ ಮಹಿಳೆ ಸುನೀತಾ ಮಹಾದೇವ್ ದೇಸಂಗಿ (34) ಆರೋಪಿಯ ಪತ್ನಿಯಾಗಿದ್ದು, ದಂಪತಿ ಬಂಟ್ವಾಳದ ವಗ್ಗದಲ್ಲಿ ವಾಸವಾಗಿದ್ದರು.

ದಂಪತಿಯ ನಡುವೆ ವೈವಾಹಿಕ ಕಲಹ ಉಂಟಾಗಿದ್ದು, ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ನಡೆಸಿದ್ದರು. ಹೆರಿಗೆಯಾದ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಆರೋಪಿಯು ಅಕ್ಟೋಬರ್ 4ರಂದು ಬಂಟ್ವಾಳದ ಮನೆಗೆ ಕರೆದುಕೊಂಡು ಬಂದಿದ್ದನು. ಅಕ್ಟೋಬರ್ 22ರಂದು ಸುನೀತಾ ತನ್ನ ಸಹೋದರ ಅರುಣ್ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಅಕ್ಟೋಬರ್ 23ರಂದು ಮುಂಜಾನೆ ಸಂಜೀವಕುಮಾರ್ ಅರುಣ್ ಅವರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಅರುಣ್ ಪರಿಶೀಲಿಸಿದಾಗ ಸುನೀತಾ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹದ ಮೇಲೆ ಹಲ್ಲೆಯ ಗಾಯಗಳು ಹಾಗೂ ರಕ್ತದ ಗುರುತುಗಳು ಕಂಡುಬಂದಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಕ್ಟೋಬರ್ 22ರ ರಾತ್ರಿ ಹಾಗೂ ಅಕ್ಟೋಬರ್ 23ರ ಮುಂಜಾನೆಯ ನಡುವೆ ಸಂಜೀವಕುಮಾರ್ ಪತ್ನಿ ಸುನೀತಾ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 142/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Leave a Reply