October 26, 2026
WhatsApp Image 2026-10-26 at 3.32.12 PM

ಸುಲ್ತಾನ್‌ಪುರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ಕಾನ್ವಾಯ್ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತಕ್ಕೀಡಾಗಿದೆ. ಸುಲ್ತಾನ್‌ಪುರ ಜಿಲ್ಲೆಯ ಹಲಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಎಕ್ಸ್‌ಪ್ರೆಸ್‌ವೇಯ 91ನೇ ಕಿಲೋಮೀಟರ್ ಬಳಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ರಾಹುಲ್ ಗಾಂಧಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ

ರಾಹುಲ್ ಗಾಂಧಿ ಅವರು ದೆಹಲಿಯಿಂದ ಲಖನೌಗೆ ಆಗಮಿಸಿದ ಬಳಿಕ, ಸುಲ್ತಾನ್‌ಪುರದ ಸಂಸದರು ಮತ್ತು ಶಾಸಕರ ನ್ಯಾಯಾಲಯದಲ್ಲಿ ನಡೆಯಲಿದ್ದ ವಿಚಾರಣೆಗೆ ಹಾಜರಾಗಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಅವರ ಕಾನ್ವಾಯ್ ಸಾಗುತ್ತಿದ್ದಾಗ ಮುಂಭಾಗದ ವಾಹನ ದಿಢೀರ್ ಬ್ರೇಕ್ ಹಾಕಿದೆ ಎನ್ನಲಾಗಿದೆ. ಇದರಿಂದ ಹಿಂದಿನಿಂದ ಬರುತ್ತಿದ್ದ ವಾಹನಗಳು ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಪರಿಣಾಮ ಕಾನ್ವಾಯ್‌ನಲ್ಲಿದ್ದ ವಾಹನಗಳಿಗೆ ಹಾನಿಯಾಗಿದೆ.

ಈ ಸರಣಿ ಅಪಘಾತದಲ್ಲಿ ಕಾನ್ವಾಯ್‌ನಲ್ಲಿದ್ದ ಐದು ವಾಹನಗಳು ಹಾಗೂ ಒಂದು ಆಂಬ್ಯುಲೆನ್ಸ್ ಜಖಂಗೊಂಡಿವೆ ಎಂದು ವರದಿಯಾಗಿದೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಯಿತು. ಘಟನೆಯ ಬಳಿಕ ರಾಹುಲ್ ಗಾಂಧಿ ಅವರು ಸುರಕ್ಷಿತವಾಗಿ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಮತ್ತು ವಾಹನಗಳಿಗೆ ಉಂಟಾದ ಹಾನಿಯ ಪ್ರಮಾಣ ಎಷ್ಟು ಎಂಬ ಬಗ್ಗೆ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.

About The Author

Leave a Reply