

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಶಾಲಾ ಬಾಲಕಿಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಕೊಪ್ಪರಿಗೆ ಗುಡ್ಡೆ ಕಡುಬಿನ ಕೆರೆಯಲ್ಲಿ ಭಾನುವಾರ ಸಂಭವಿಸಿದೆ.
ಮೃತರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುದ್ದಿನಕೊಪ್ಪ ಮೂಲದ, ಪ್ರಸ್ತುತ ಮುಳ್ಳಿಕಟ್ಟೆ ಟೆಂಟ್ ಹೌಸ್‌ನಲ್ಲಿ ವಾಸವಾಗಿದ್ದ ಚಂದ್ರು ಬಸವರಾಜ ವೇಷಗಾರ ಎಂಬುವರ ಪುತ್ರಿ ಸುನೀತಾ (13) ಹಾಗೂ ಅವರ ಸಂಬಂಧಿ ಡಿ. ಮಂಜುನಾಥ್ ಅವರ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಬ್ಬರೂ ಹೊಸಾಡಿನ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಭಾನುವಾರ ಸಂಜೆ ಟೆಂಟ್ ಹೌಸ್ ನಿವಾಸಿಗಳಾದ 5 ಮಕ್ಕಳು ಬಟ್ಟೆ ತೊಳೆಯಲು ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ತೆರಳಿದ್ದರು. ಕೆರೆಯ ದಡದಲ್ಲಿ ಸುನೀತಾ ಹಾಗೂ ವೈಶಾಲಿ ಬಟ್ಟೆ ಒಗೆಯುತ್ತಿದ್ದಾಗ, ಸುನೀತಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ವೈಶಾಲಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿದ್ದ ಇತರ ಮಕ್ಕಳು ಕೂಡಲೇ ವಿಷಯ ತಿಳಿಸಿದ್ದು, ಪಾಲಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ, ಸಂಜೆ 5.15ರ ಅಂದಾಜಿಗೆ ಇಬ್ಬರೂ ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.
ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಶವ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತ ಸುನೀತಾಳ ತಂದೆ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






