October 27, 2026
WhatsApp Image 2026-10-26 at 3.19.32 PM

ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದವರು. ಪತಿಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಡೇಸಿ ಇಮ್ಯಾನುವಲ್, ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ತೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿದ್ದು, ಪತ್ತೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಶಡ್ರಕ್ ಇಮ್ಯಾನುವಲ್ ಅವರು 2025ರ ಮೇ 16ರಂದು ಉದ್ಯೋಗ ವೀಸಾದಡಿ ಇಸ್ರೇಲ್‌ಗೆ ತೆರಳಿದ್ದರು. ಮಂಗಳೂರಿನ ಫರ್ನಾಂಡಿಸ್ ಗ್ರೂಪ್ ನೇಮಕಾತಿ ಸಂಸ್ಥೆಯ ಮೂಲಕ ಉದ್ಯೋಗ ಪಡೆದಿದ್ದ ಅವರು, ನಜರೆತ್ ಸಮೀಪದ ನೋಫ್ ಹಗಲಿಲ್‌ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ನಿತ್ಯ ವಾಟ್ಸ್‌ಆ್ಯಪ್ ಕರೆಯಲ್ಲಿ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಶಡ್ರಕ್, ಅಕ್ಟೋಬರ್ 16ರಂದು ರಾತ್ರಿ 8.05ರ ಸುಮಾರಿಗೆ ಸುಮಾರು 22 ನಿಮಿಷಗಳ ಕಾಲ ವಿಡಿಯೋ ಕರೆ ಮೂಲಕ ಮಾತನಾಡಿದ್ದರು‌. ಅದಾದ ಬಳಿಕ ಅವರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಅಕ್ಟೋಬರ್ 18ರಿಂದ ಕುಟುಂಬಸ್ಥರು ಹಾಗೂ ಇಸ್ರೇಲ್‌ನಲ್ಲಿರುವ ಅವರ ಸ್ನೇಹಿತರು ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ಅಲ್ಲದೆ, ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲೂ ಕಾಣಿಸಿಕೊಳ್ಳದಿರುವುದು ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಪತಿಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಡೇಸಿ ಇಮ್ಯಾನುವಲ್ ಅವರು ಅಕ್ಟೋಬರ್ 21ರಂದು ತೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ಅಧಿಕಾರಿಗೆ ತುರ್ತು ಮನವಿ ಸಲ್ಲಿಸಿದ್ದಾರೆ.

ಇಸ್ರೇಲ್ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಪ್ರಕರಣದ ಕುರಿತು ತನಿಖೆ ನಡೆಸಬೇಕು, ಶಡ್ರಕ್ ಕೆಲಸ ಮಾಡುತ್ತಿದ್ದ ಕಂಪೆನಿ ಹಾಗೂ ನೇಮಕಾತಿ ಸಂಸ್ಥೆಯನ್ನು ಸಂಪರ್ಕಿಸಿ ಅವರ ಕೊನೆಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ. ಅಲ್ಲದೆ ಅವರು ಯಾವುದಾದರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಯೇ ಅಥವಾ ಸ್ಥಳೀಯ ಭದ್ರತಾ ಪಡೆಗಳ ವಶದಲ್ಲಿದ್ದಾರೆಯೇ ಎಂಬುದನ್ನೂ ಪರಿಶೀಲಿಸಿ, ಶೀಘ್ರವೇ ಕುಟುಂಬಕ್ಕೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.

About The Author

Leave a Reply