

ಉಡುಪಿ: ಲಾರಿಯಿಂದ ಅನ್‌ಲೋಡ್ ಮಾಡುತ್ತಿದ್ದ ಗಾಜಿನ ಬ್ಲಾಕ್ ಮೈಮೇಲೆ ಬಿದ್ದು ಉಡುಪಿಯ ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ಉಡುಪಿ ಶ್ರೀಕೃಷ್ಣ ಮಠದ ಸಮೀಪದ ನಿವಾಸಿ, ಸಾಮಾಜಿಕ ಕಾರ್ಯಕರ್ತ ಸುನೀಲ್ ಬೈಲಕೆರೆ(45) ಎಂದು ಗುರುತಿಸಲಾಗಿದೆ.
ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಗೆ ಲಾರಿಯಲ್ಲಿ ಬಂದಿದ್ದ ಟನ್ ಗಟ್ಟಲೆ ಭಾರದ ಗಾಜಿನ ಬ್ಲಾಕ್‌ಗಳನ್ನು ಇವರು ಅನ್‌ಲೋಡ್ ಮಾಡಲು ಮುಂದಾಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ನಾಲ್ಕು ಟನ್ ಭಾರದ ಗಾಜಿನ ಬ್ಲಾಕ್ ಇವರ ಮೈಮೇಲೆ ಬಿದ್ದಿದೆ ಎಂದು ಹೇಳಲಾಗಿದೆ.

ಇದರಿಂದ ಇವರು ಗಾಜಿನ ಬ್ಲಾಕ್ ಮತ್ತು ಲಾರಿ ಮಧ್ಯೆ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.






