

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಮೂರ್ಜೆಬೆಟ್ಟು ನಿವಾಸಿ, ಹಿರಿಯ ಸಾಮಾಜಿಕ ಹಾಗೂ ರಾಜಕೀಯ ಮುಖಂಡರಾದ 83 ವರ್ಷದ ಬಾಲಕೃಷ್ಣ ರೈ (ಕಿಟ್ಟಣ್ಣ ರೈ) ಅವರು 2026-27ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಸುದೀರ್ಘ ಸೇವಾ ಜೀವನಕ್ಕೆ ಸಂದ ಗೌರವವಾಗಿದೆ.
ಬಿ.ಎ. ಪದವೀಧರರಾಗಿರುವ ಕಿಟ್ಟಣ್ಣ ರೈ ಅವರು ರಾಜ್ಯಮಟ್ಟದ ವಾಲಿಬಾಲ್ ಆಟಗಾರರಾಗಿಯೂ ಗುರುತಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಮಾರು 50–60 ವರ್ಷಗಳ ಸುದೀರ್ಘ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಜೀವನ ಹೊಂದಿರುವ ಅವರು ಜಿಲ್ಲೆಯ ಅನೇಕ ಹೆಸರಾಂತ ರಾಜಕೀಯ ನಾಯಕರ ಸಮಕಾಲೀನರಾಗಿದ್ದಾರೆ.
ಮಂಡಲ ಪಂಚಾಯತ್ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾಗಿ ಒಟ್ಟು ಏಳು ಬಾರಿ ಆಯ್ಕೆಯಾಗಿರುವ ಅವರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಟ್ಲಪಡ್ನೂರು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಸಂಘದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಯುವ ಕಾಂಗ್ರೆಸ್ನಿಂದ ಆರಂಭಿಸಿ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಮಟ್ಟದವರೆಗೆ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಇಂದು ಕಿಟ್ಟಣ್ಣ ರೈ ಅವರ ಮನೆಗೆ ಭೇಟಿ ನೀಡಿ, ಶಾಲು ಹೊದಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.
ಕಳೆದ 32 ವರ್ಷಗಳಿಂದ ಕಿಟ್ಟಣ್ಣ ರೈ ಅವರೊಂದಿಗೆ ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಆತ್ಮೀಯ ಭಾಂದವ್ಯ ಹೊಂದಿರುವ ಸುಭಾಶ್ಚಂದ್ರ ಶೆಟ್ಟಿ ಅವರು, ವಿಟ್ಲಪಡ್ನೂರು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕಿಟ್ಟಣ್ಣ ರೈ ಅವರೊಂದಿಗೆ ಕಾರ್ಯನಿರ್ವಹಿಸಿದ ದಿನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಸಂಘದ ಬೆಳವಣಿಗೆಗಾಗಿ ಇಬ್ಬರೂ ಪರಸ್ಪರ ಸಹಕಾರದೊಂದಿಗೆ ಶ್ರಮಿಸಿದ ಕ್ಷಣಗಳು ಹಾಗೂ ರಾಜಕೀಯ ಜೀವನದ ಅನೇಕ ಅನುಭವಗಳನ್ನು ನೆನಪಿಸಿಕೊಂಡು ತಮ್ಮ ದೀರ್ಘಕಾಲದ ಒಡನಾಟವನ್ನು ಹಂಚಿಕೊಂಡರು. ಹಿರಿಯ ನಾಯಕನ ಸಾಧನೆ ಹಾಗೂ ಸೇವೆಯನ್ನು ಗೌರವಿಸಿದ ಸುಭಾಶ್ಚಂದ್ರ ಶೆಟ್ಟಿ ಅವರು, ಕಿಟ್ಟಣ್ಣ ರೈ ಅವರ ಆಶೀರ್ವಾದ ಪಡೆದರು.






