November 4, 2026
WhatsApp Image 2026-11-04 at 1.43.19 PM

ಮಂಗಳೂರು: ಕರ್ನಾಟಕ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಇತ್ತೀಚಿನ ವರ್ಷಗಳಲ್ಲಿ ತನ್ಘನತೆ, ಗೌರವ ಕಳೆದುಕೊಳ್ಳುತ್ತಿದ್ದು, ಇದು ವ್ಯಾಪಾರೀಕರಣದ ಹಾದಿ ಹಿಡಿದಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಹಲವು ನಿಜವಾದ ಸಾಧಕರಿಗೆ, ಸಮಾಜ ಸೇವೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಸಂತೋಷದ, ಹೆಮ್ಮೆಯ ವಿಷಯ. ಅವರ ಸಾಧನೆಯನ್ನು ನಾವು ಗೌರವಿಸುತ್ತೇವೆ. ಆದರೆ, ಅದೇ ಪಟ್ಟಿಯಲ್ಲಿ ಯಾವುದೇ ಕನ್ನಡ ಸೇವೆ, ಸಾಹಿತ್ಯ ಸೇವೆ, ಸಾಮಾಜಿಕ ಹೋರಾಟದ ಹಿನ್ನೆಲೆಯೇ ಇಲ್ಲದ ಕೆಲವು ಶ್ರೀಮಂತ ವ್ಯಾಪಾರಸ್ಥರು, ಉದ್ಯಮಿಗಳಿಗೆ ಪ್ರಶಸ್ತಿ ನೀಡಿರುವುದು ಇಡೀ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.

ಪ್ರಶಸ್ತಿ ಎಂದರೆ ಏನು?
ರಾಜ್ಯೋತ್ಸವ ಪ್ರಶಸ್ತಿ ಎಂದರೆ ಅದು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಕಲೆ, ಸಮಾಜ ಸೇವೆ, ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರನ್ನು ಗುರುತಿಸಿ ನೀಡುವ ಗೌರವ. ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಶಾಲೆ ಉಳಿಸಲು ಹೋರಾಡಿದ ಶಿಕ್ಷಕ, ಕನ್ನಡ ಪುಸ್ತಕಕ್ಕಾಗಿ ತಮ್ಮ ಆಸ್ತಿ ಮಾರಿದ ಸಾಹಿತಿ, ಅಕ್ಷರಕ್ಕಾಗಿ ದುಡಿದ ಪತ್ರಕರ್ತ, ಬಡವರಿಗಾಗಿ ಆಸ್ಪತ್ರೆ ಕಟ್ಟಿದ ವೈದ್ಯ – ಇಂತಹವರಿಗೆ ಸಿಗಬೇಕಾದ ಪ್ರಶಸ್ತಿ ಇದು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಯಾರ ಬಳಿ ಹಣವಿದೆ, ಯಾರಿಗೆ ರಾಜಕೀಯ ಪ್ರಭಾವ ಇದೆ, ಯಾರು ವೇದಿಕೆಗೆ ದೊಡ್ಡ ಮೊತ್ತದ ದೇಣಿಗೆ ಕೊಡಬಲ್ಲರು ಅಂತವರನ್ನು ಹುಡುಕಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ಪ್ರಶಸ್ತಿಯ ವ್ಯಾಪಾರೀಕರಣವಲ್ಲದೆ ಮತ್ತೇನು? ಎಂದು ರಿಯಾಝ್ ಹರೇಕಳ ಪ್ರಶ್ನಿಸಿದ್ದಾರೆ.

ವಾಟಾಳ್ ನಾಗರಾಜ್ ತಿರಸ್ಕಾರವೇ ಕನ್ನಡಿ:
ಕನ್ನಡಕ್ಕಾಗಿ ತಮ್ಮ ಇಡೀ ಜೀವನವನ್ನೇ ಹೋರಾಟದಲ್ಲಿ ಕಳೆದ, ಹಲವು ಬಾರಿ ಜೈಲುವಾಸ ಅನುಭವಿಸಿದ ಚಳುವಳಿಗಾರ ವಾಟಾಳ್ ನಾಗರಾಜ್ ಅವರೇ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. “ನನಗೆ ಪ್ರಶಸ್ತಿ ಮುಖ್ಯವಲ್ಲ, ನಾಡಿನ ಜನರ ಹಿತವೇ ಮುಖ್ಯ. ಕನ್ನಡಿಗರಿಗೆ ನ್ಯಾಯ ಸಿಗುವವರೆಗೆ ನನ್ನ ಹೋರಾಟ ನಿಲ್ಲದು” ಎಂದು ಅವರು ಹೇಳಿ ಪ್ರಶಸ್ತಿಯನ್ನು ತಿರಸ್ಕರಿಸಿರುವುದು ಸರ್ಕಾರಕ್ಕೆ ದೊಡ್ಡ ಮುಖಭಂಗ. ನಿಜವಾದ ಕನ್ನಡ ಹೋರಾಟಗಾರನಿಗೆ ಪ್ರಶಸ್ತಿ ಬೇಡ ಎನಿಸಿದರೆ, ಆ ಪ್ರಶಸ್ತಿ ವ್ಯವಸ್ಥೆಯಲ್ಲಿ ಏನೋ ಲೋಪವಿದೆ ಎಂದರ್ಥ.

ಮೊನ್ನೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಕೆಲವು ಉದ್ಯಮಿಗಳನ್ನು ನೋಡಿ ತಾವು ನಿಜಕ್ಕೂ ತಬ್ಬಿಬ್ಬಾದೆ ಎಂದು ರಿಯಾಝ್ ಹರೇಕಳ ಹೇಳಿದ್ದಾರೆ. ಕನ್ನಡಕ್ಕೂ ಅವರಿಗೂ ಏನು ಸಂಬಂಧ? ಅವರು ಕನ್ನಡಕ್ಕಾಗಿ ಏನು ಹೋರಾಟ ಮಾಡಿದ್ದಾರೆ? ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ, ಮುಂದಿನ ಚುನಾವಣೆಯ ಲೆಕ್ಕಾಚಾರಕ್ಕಾಗಿ ಇಂತಹ ಆಯ್ಕೆ ನಡೆದಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಜವಾಬ್ದಾರಿ ಏನು?
ಪ್ರಶಸ್ತಿಯ ಗೌರವವನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಿಜವಾದ ಕನ್ನಡ ಪರ ಚಿಂತಕರು, ಸಾಹಿತಿಗಳು ಇರಬೇಕು. ಕೇವಲ ಶಿಫಾರಸು ಪತ್ರ, ರಾಜಕೀಯ ಒತ್ತಡ ನೋಡಿ ಪ್ರಶಸ್ತಿ ನೀಡಬಾರದು. ಪ್ರಶಸ್ತಿ ಪಡೆದ ವ್ಯಕ್ತಿಯ ಹಿನ್ನೆಲೆ, ಕನ್ನಡಕ್ಕೆ ಅವರ ಕೊಡುಗೆ ಏನು ಎಂಬುದನ್ನು ಜನರ ಮುಂದೆ ಇಡಬೇಕು.

ರಿಯಾಝ್ ಹರೇಕಳ ಕೊನೆಯಲ್ಲಿ ಸರ್ಕಾರಕ್ಕೆ ಒಂದು ಮನವಿ ಮಾಡಿದ್ದಾರೆ – “ದಯವಿಟ್ಟು ರಾಜ್ಯೋತ್ಸವ ಪ್ರಶಸ್ತಿಯನ್ನು ಹರಾಜು ಹಾಕಬೇಡಿ. ಅದು ಕನ್ನಡಿಗರ ಭಾವನೆ. ಅರ್ಹರಿಗೆ ಸಿಗಲಿ, ಹೊಗಳಿಕೆಗೆ ಅಲ್ಲ, ಸಾಧನೆಗೆ ಸಿಗಲಿ.”

About The Author

Leave a Reply