November 16, 2026
WhatsApp Image 2026-11-16 at 12.57.04 PM

ಪುತ್ತೂರು: ಪುತ್ತೂರು ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ಮಾಧ್ಯಮಗಳ ಮೂಲಕ ಜಂಟಿಯಾಗಿ ಜನರ ಮುಂದಿಡಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬಹಿರಂಗ ಕರೆ ನೀಡಿದ್ದಾರೆ.

ಶನಿವಾರ ಸಂಜೆ ಸಂಪ್ಯದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ‘ಗ್ರಾಮ ಮಟ್ಟದ ಜನಾಂದೋಲನ ಸಭೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

“ಹರೀಶ್ ಪೂಂಜಾ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ನಾನು ಈ ಕರೆ ನೀಡುತ್ತಿದ್ದೇನೆ. ಇದನ್ನು ಹೊರತುಪಡಿಸಿ ಯಾವುದೇ ಕೀಳು ಮಟ್ಟದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ; ಅದಕ್ಕೆ ಜನರೇ ಉತ್ತರ ನೀಡುತ್ತಾರೆ. ಸೋಮವಾರ (ನ.16) ಮಧ್ಯಾಹ್ನ 12 ಗಂಟೆಗೆ ನಾನು ಪುತ್ತೂರು ಶಾಸಕರ ಕಚೇರಿಯಲ್ಲಿ ನನ್ನ ಕ್ಷೇತ್ರದ ಸಾಧನೆ ಮತ್ತು ಅನುದಾನದ ವಿವರಗಳೊಂದಿಗೆ ಸಿದ್ಧನಿರುತ್ತೇನೆ. ನೀವೂ ಕೂಡ ನಿಮ್ಮ ಸಾಧನೆ, ಅನುದಾನದ ವಿವರಗಳನ್ನು ಬರೆದುಕೊಂಡು ಬನ್ನಿ” ಎಂದು ಅಶೋಕ್ ರೈ ಸವಾಲು ಹಾಕಿದರು.

ಇಬ್ಬರೂ ಸಿದ್ಧಪಡಿಸಿದ ವಿವರಗಳನ್ನು ಮಾಧ್ಯಮಗಳ ಮುಂದೆ ಇಡೋಣ. ನಮ್ಮಿಬ್ಬರ ನಡುವೆ ಯಾವುದೇ ವಾಗ್ವಾದ ಬೇಡ, ಮಾಧ್ಯಮದವರು ಮತ್ತು ಜನರೇ ಸತ್ಯಾಸತ್ಯತೆಯನ್ನು ನಿರ್ಧರಿಸಲಿ. ಬಳಿಕ ಕಾಫಿ ಕುಡಿದು ತೆರಳೋಣ” ಎಂದು ಆಹ್ವಾನ ನೀಡಿದರು. ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುವಾಗ ನನಗೆ ಬೇಸರವಾಗಿಲ್ಲ, ಏಕೆಂದರೆ ಅಭಿವೃದ್ಧಿಯೇ ನನ್ನ ಏಕೈಕ ಉದ್ದೇಶ. ನಾನು ಇದುವರೆಗೂ ಬೇರೆ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಬೆಳ್ತಂಗಡಿಗೆ ಹೋದಾಗ ಹರೀಶ್ ಪೂಂಜಾ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಹಿಂದಿನ 15 ವರ್ಷಗಳ ಕೆಲಸ ಮತ್ತು ನನ್ನ ಅವಧಿಯ ಕೆಲಸಗಳನ್ನು ಜನರು ತುಲನೆ ಮಾಡಿ ನೋಡಲಿ. ಅಭಿವೃದ್ಧಿ ಆಗಿದೆ ಎನಿಸಿದರೆ ಮಾತ್ರ ನಮಗೆ ಮತ ನೀಡಿ” ಎಂದರು.

ನಾವು ಕುತಂತ್ರದ ರಾಜಕೀಯ ಮಾಡುವುದಿಲ್ಲ. ಎಷ್ಟು ಮಂದಿ ಯುವಕರ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆದಿದ್ದೇವೆ, ಅದರಲ್ಲಿ ಎಷ್ಟು ಮಂದಿ ಬಿಜೆಪಿ ಕಾರ್ಯಕರ್ತರಿದ್ದಾರೆ ಎಂಬುದನ್ನು ಪರಿಶೀಲಿಸಿ” ಎಂದು ಅಶೋಕ್ ರೈ ತಿರುಗೇಟು ನೀಡಿದರು

About The Author

Leave a Reply