November 19, 2026
WhatsApp Image 2026-11-19 at 5.12.10 PM

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಸ್ವಂತ ತಂದೆಯೇ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕಾಲುವೆಗೆ ಎಸೆದಿರುವ ಆರೋಪ ಕೇಳಿಬಂದಿದೆ. ಚಾಕೊಲೇಟ್ ಹಾಗೂ ವಡಾಪಾವ್ ಕೊಡಿಸುವುದಾಗಿ ಆಮಿಷವೊಡ್ಡಿ ಮಕ್ಕಳನ್ನು ಕರೆದೊಯ್ದ ತಂದೆ, ಬಳಿಕ ಇಬ್ಬರನ್ನೂ ಕಾಲುವೆಗೆ ಎಸೆದಿದ್ದಾನೆ ಎನ್ನಲಾಗಿದೆ.

ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪೈಠಣ್ ತಾಲೂಕಿನ ನಂದರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೋಮನಾಥ್ ರೋಜ್ ಎಂಬಾತ ಆರೋಪಿಯಾಗಿದ್ದು, ಐದು ವರ್ಷದ ಶ್ಯಾಮ್ ಹಾಗೂ ಏಳು ವರ್ಷದ ಆರ್ಯನ್ ಎಂಬವರು ನಾಪತ್ತೆಯಾದ ಮಕ್ಕಳು.

ಸೋಮವಾರ ಸಂಜೆ ಸುಮಾರು ಏಳು ಗಂಟೆಯ ವೇಳೆಗೆ ಮಕ್ಕಳಿಗೆ ಚಾಕೊಲೇಟ್ ಹಾಗೂ ವಡಾಪಾವ್ ಕೊಡಿಸುವುದಾಗಿ ಹೇಳಿ ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದ ಆರೋಪಿ, ಜಯಕ್ವಾಡಿ ಎಡದಂಡೆ ಕಾಲುವೆಯ ಬಳಿ ಇಬ್ಬರು ಮಕ್ಕಳನ್ನು ನೀರಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.

ನೀರಿಗೆ ಬಿದ್ದ ಮಕ್ಕಳು ತಮ್ಮನ್ನು ರಕ್ಷಿಸುವಂತೆ ತಂದೆಯ ಬಳಿ ಅಂಗಲಾಚಿದ್ದಾರೆ. ‘ಅಪ್ಪಾ, ಮನೆಗೆ ಹೋಗೋಣ’ ಎಂದು ಕಣ್ಣೀರಿಡುತ್ತಾ ಬೇಡಿಕೊಂಡರೂ ತಂದೆ ಕರುಣೆ ತೋರದೆ ಅಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪಚೋಡ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿ ಸೋಮನಾಥ್ ರೋಜ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಮಕ್ಕಳನ್ನು ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಸದ್ಯ ಪೊಲೀಸರು ಹಾಗೂ ಕುಟುಂಬಸ್ಥರು ಕಾಲುವೆಯಲ್ಲಿ ಮಕ್ಕಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈವರೆಗೂ ಇಬ್ಬರು ಮಕ್ಕಳ ಪತ್ತೆಯಾಗಿಲ್ಲ. ಸ್ವಂತ ತಂದೆಯೇ ಕಂದಮ್ಮಗಳ ಜೀವಕ್ಕೆ ಕಂಟಕವಾಗಿರುವ ಈ ಘಟನೆ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ.

About The Author

Leave a Reply