November 25, 2026
WhatsApp Image 2026-10-16 at 10.57.59 AM

ಪುತ್ತೂರು: ಮೆಸ್ಕಾಂ ಇಲಾಖೆಯ ಅಧಿಕಾರಿಯೊಬ್ಬರು ಖಾಸಗಿ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಲ್ಲಾದರೂ ಬಹಿರಂಗಪಡಿಸಿದರೆ ಕಳ್ಳತನದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಳುವಾರಿನ ಎಲೆಕ್ಟ್ರಿಕಲ್ ಸಂಸ್ಥೆಯೊಂದರಲ್ಲಿ ಕಚೇರಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ನೀಡಿದ ದೂರಿನ ಆಧಾರದಲ್ಲಿ, ಮೆಸ್ಕಾಂ ಪುತ್ತೂರು ಉಪವಿಭಾಗದ ಸಿಬ್ಬಂದಿ ದುರ್ಗಾಸಿಂಗ್ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 127(2), 75(2) ಹಾಗೂ 351(2)ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳ ಪರಿಶೀಲನೆ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದ ಆರೋಪ

ಅಕ್ಟೋಬರ್ 16ರಂದು ಪರಿಚಯದ ವ್ಯಕ್ತಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕದ ಪರವಾನಗಿ ಪಡೆಯುವ ಸಂಬಂಧದ ಕೆಲಸಕ್ಕಾಗಿ ಮಹಿಳೆ ಮೆಸ್ಕಾಂ ಕಚೇರಿಗೆ ತೆರಳಿದ್ದರು. ಈ ವೇಳೆ ಶಾಖಾಧಿಕಾರಿಗಳು ದುರ್ಗಾಸಿಂಗ್ ಅವರಿಗೆ ಸ್ಥಳ ಪರಿಶೀಲನೆಗೆ ತೆರಳುವಂತೆ ಸೂಚಿಸಿದ್ದರು. ತಾನು ಆಟೋರಿಕ್ಷಾದಲ್ಲಿ ಬರುವುದಾಗಿ ಮಹಿಳೆ ತಿಳಿಸಿದರೂ, ದುರ್ಗಾಸಿಂಗ್ ತನ್ನ ಕಾರಿನಲ್ಲಿಯೇ ಬರುವಂತೆ ಹೇಳಿ ಪುತ್ತೂರಿನ ಕಿಲ್ಲೆ ಮೈದಾನದಿಂದ ಜಿಡೆಕಲ್ಲಿನಲ್ಲಿರುವ ಮನೆಗೆ ಕರೆದೊಯ್ದಿದ್ದರು ಎನ್ನಲಾಗಿದೆ.

ಅಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ವಾಪಸ್ ಬರುವ ವೇಳೆ, ಮೊಬೈಲ್ ಫೋನ್ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿ ಸಾಮೆತ್ತಡ್ಕದಲ್ಲಿರುವ ತಮ್ಮ ವಸತಿಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಅಥವಾ ಬಹಿರಂಗಪಡಿಸಿದರೆ ಉಂಗುರ ಕದ್ದಿರುವುದಾಗಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ತಾವು ತೆಗೆದಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಇಲಾಖೆಯ ಸಿಬ್ಬಂದಿ ಹಾಗೂ ಇತರರ ಬಳಿ ಈ ವಿಚಾರವನ್ನು ಹೇಳಿಕೊಂಡು ತಮ್ಮ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ನವೆಂಬರ್ 23ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ದುರ್ಗಾಸಿಂಗ್ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ತಮ್ಮನ್ನು ದುರುಗುಟ್ಟಿ ನೋಡಿಕೊಂಡು ಹೋಗಿದ್ದಾರೆ. ಆರೋಪಿಗೆ ಹಣ ಹಾಗೂ ರಾಜಕೀಯ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ತಮಗೆ ತೊಂದರೆಯಾಗಬಹುದು ಎಂಬ ಆತಂಕವಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ನವೆಂಬರ್ 24ರಂದು ರಾತ್ರಿ 7.15ರ ಸುಮಾರಿಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೆಸ್ಕಾಂ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು

ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗಕ್ಕೆ ಸಂಬಂಧಿಸಿ ನವೆಂಬರ್ 5ರಂದು ಪುತ್ತೂರಿನಲ್ಲಿ ನಡೆದಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ಮೆಸ್ಕಾಂ ಅಧಿಕಾರಿಯೊಬ್ಬರು ದೌರ್ಜನ್ಯ ಎಸಗಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಗಿತ್ತು.

About The Author

Leave a Reply