

ಟೆಹ್ರಾನ್: ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಹಾಡಿದ ಆರೋಪದಡಿ ಇರಾನ್‌ನ 29 ವರ್ಷದ ಖ್ಯಾತ ಗಾಯಕಿ ಪರಸ್ತೂ ಅಹ್ಮದಿ (Parastoo Ahmadi) ಅವರಿಗೆ ವಿಧಿಸಲಾಗಿದ್ದ 74 ಚಾಟಿ ಏಟುಗಳ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಗಾಯಕಿಯ ಪರ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದ್ದು, ಇರಾನ್ ಆಡಳಿತದ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.
ಇರಾನ್‌ನ ಸಾಂಪ್ರದಾಯಿಕ ಹಾಗೂ ಜಾನಪದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪರಸ್ತೂ ಅಹ್ಮದಿ ಅವರಿಗೆ ಸಂಗೀತದ ಬಗ್ಗೆ ಅಪಾರ ಒಲವಿದೆ. ಇದರ ಭಾಗವಾಗಿ 2024ರ ಡಿಸೆಂಬರ್‌ನಲ್ಲಿ ಅವರು ವಿಶೇಷ ಸಂಗೀತ ಕಾರ್ಯಕ್ರಮವೊಂದನ್ನು ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಪ್ರಕಟಿಸಿದ್ದರು.
ಪುರಾತನ ಕಟ್ಟಡವೊಂದರ ಆವರಣದಲ್ಲಿ ಪ್ರೇಕ್ಷಕರಿಲ್ಲದೆ ಚಿತ್ರೀಕರಿಸಲಾಗಿದ್ದ ಈ ವಿಡಿಯೋದಲ್ಲಿ ಪರಸ್ತೂ ಅವರು ಉದ್ದನೆಯ ಕಪ್ಪು ಗೌನ್ ಧರಿಸಿ ಹಾಡಿದ್ದರು. ಆದರೆ, ತಲೆಯ ಮೇಲೆ ಹಿಜಾಬ್ ಧರಿಸಿರಲಿಲ್ಲ. ಅಲ್ಲದೆ, ಅವರೊಂದಿಗೆ ನಾಲ್ವರು ಪುರುಷ ಸಂಗೀತಗಾರರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಜಾಗತಿಕ ಗಮನ ಸೆಳೆದಿತ್ತು.

ಇರಾನ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬ ಕಠಿಣ ನಿಯಮವಿದೆ. ಅಲ್ಲದೆ, ಮಹಿಳೆಯರು ಪುರುಷ ಪ್ರೇಕ್ಷಕರ ಮುಂದೆ ಹಾಡುವುದಕ್ಕೂ ನಿರ್ಬಂಧಗಳಿವೆ. ಈ ನಿಯಮಗಳ ಉಲ್ಲಂಘನೆಯ ಆರೋಪದಡಿ ಅಹ್ಮದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಬಳಿಕ ಅವರಿಗೆ 74 ಚಾಟಿ ಏಟುಗಳ ಶಿಕ್ಷೆ ವಿಧಿಸಲಾಗಿತ್ತು.
2022ರ ಸೆಪ್ಟೆಂಬರ್‌ನಲ್ಲಿ ಹಿಜಾಬ್ ನಿಯಮ ಉಲ್ಲಂಘನೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆ ಇರಾನ್‌ನಲ್ಲಿ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಮಹಿಳೆಯರ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು.
ಇದೀಗ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ ಚಾಟಿ ಏಟುಗಳ ಶಿಕ್ಷೆ ಜಾರಿಗೊಳಿಸಿರುವ ಸುದ್ದಿ ಮಾನವ ಹಕ್ಕುಗಳ ಹೋರಾಟಗಾರರು, ಕಲಾವಿದರು ಹಾಗೂ ಮಹಿಳಾ ಹಕ್ಕುಗಳ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಲಾತ್ಮಕ ಅಭಿವ್ಯಕ್ತಿ ಮತ್ತು ಮಹಿಳೆಯರ ಸ್ವಾತಂತ್ರ್ಯದ ಮೇಲೆ ಇರಾನ್ ಆಡಳಿತದ ದಮನಕಾರಿ ನೀತಿ ಮುಂದುವರಿದಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.






