ವ್ಯಾಪಕ ಮಳೆ: ಫಲ್ಗುಣಿ ನದಿ ಪ್ರವಾಹ, 8 ಕುಟುಂಬಗಳ ಸ್ಥಳಾಂತರ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ವ್ಯಾಪಕ ಮಳೆಯಾಗಿದೆ. ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ಪೊಳಲಿ ಸಮೀಪದ ಅಮ್ಮುಂಜೆ ಮತ್ತು ‌ಕರಿಯಂಗಳ ಗ್ರಾಮದ ಎಂಟು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಸೊಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿದಿದೆ. ಮರೋಡಿ ಗ್ರಾಮದ ದೆರಾಜೆಬೆಟ್ಟ ರಸ್ತೆಯ ಕಿರು ಸೇತುವೆಯೂ ಪ್ರವಾಹದಿಂದಾಗಿ ಕುಸಿದು ಬಿದ್ದಿದೆ.

ವೇಣೂರು ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಚರ್ಚ್ ಬಳಿ ರಸ್ತೆ ಜಲಾವೃತವಾಗಿತ್ತು. ರಾತ್ರಿ1.30ರ ಸುಮಾರಿಗೆ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಬಸ್‌ಗಳ ಸಂಚಾರಕ್ಕೆ ವೇಣೂರು ಪೊಲೀಸರು ನೆರವಾದರು.

ಫಲ್ಗುಣಿ ನದಿಯ ಪ್ರವಾಹದಿಂದಾಗಿ ನಗರದ ಹೊರವಲಯದ ಮೂಡುಶೆಡ್ಡೆ ಪ್ರದೇಶ ಜಲಾವ್ರತವಾಗಿದ್ದು, ಸಂತ್ರಸ್ತ ಕುಟುಂಬಗಳನ್ನು ದೋಣಿ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ಗುರುವಾರ ಬೆಳಿಗ್ಗೆ 8.30ರವರೆಗೆ ಜಿಲ್ಲೆಯ ಶಿರ್ತಾಡಿಯಲ್ಲಿ 26.9 ಸೆಂ..ಮೀ, ಮರೋಡಿಯಲ್ಲಿ 26.4, ಬಳಂಜದಲ್ಲಿ 25, ಮೇಲಂತಬೆಟ್ಟುವಿನಲ್ಲಿ 20.5, ಬೆಳುವಾಯಿಯಲ್ಲಿ 20.2, ಲಾಯಿಲದಲ್ಲಿ 19.5, ಹೊಸಂಗಡಿಯಲ್ಲಿ 17.15, ಕಲ್ಮಂಜದಲ್ಲಿ 16.8, ಚನ್ನೈತ್ತೋಡಿಯಲ್ಲಿ 16 ಹಾಗೂ ಉಜಿರೆಯಲ್ಲಿ 15.85 ಸೆಂ.ಮೀ ಮಳೆಯಾಗಿದೆ.

ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಗುರುವಾರ ಬೆಳಿಗ್ಗೆ ನೀರಿನ ಮಟ್ಟ 9.1 ಮೀಟರ್ ಗೆ ತಲುಪಿತ್ತು. 8 ಗಂಟೆಯ ವೇಳೆಗೆ 8.7 ಮೀಟರ್‌ಗೆ ಇಳಿಕೆಯಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

Leave a Reply