ಬೆಳ್ತಂಗಡಿ: ಸ್ಕೂಟರ್ ಡಿಕ್ಕಿ ಹೊಡೆಸಿದ ಅಳಿಯ- ಚಿಕಿತ್ಸೆ ಫಲಿಸದೇ ಮಾವ ಸಾವು

ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ದ್ವೇಷದಿಂದ ಅಳಿಯ ಸ್ಕೂಟರ್ ಢಿಕ್ಕಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಾವ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಕಂಬಳದಡ್ಡದಲ್ಲಿ ನಡೆದಿದೆ.

ಇಲ್ಲಿನ ಮಿತ್ತ ಬಾಗಿಲು ಗ್ರಾಮದ ಕಂಬಳದಡ್ಡ ನಿವಾಸಿ ಕೆ.ಎಚ್. ಇಬ್ರಾಹಿಂ (60) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.ಇವರ ಅಳಿಯನಾಗಿರುವ ಮುಹಮ್ಮದ್ ಶಾಫಿ ಎಂಬಾತ ಮಾವನನ್ನು ಕೊಲೈಗೈದ ಆರೋಪಿಯಾಗಿದ್ದಾನೆ .

ಮೃತ ಇಬ್ರಾಹಿಂ ಅವರ ಮಗಳು ಮತ್ತು ಅಳಿಯನ ಮಧ್ಯೆ ಕೌಟುಂಬಿಕ ಸಮಸ್ಯೆ ಇದ್ದು, ಆತ ಆಕೆಗೆ ಖರ್ಚಿಗೆ ಹಣವೂ ನೀಡುತ್ತಿರಲಿಲ್ಲ. ಚಿತ್ರಹಿಂಸೆ ನೀಡುತ್ತಿದ್ದ. ಅನೇಕ ಬಾರಿ ರಾಜಿ ಪಂಚಾಯಿತಿ, ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು, ಪೊಲೀಸ್ ಠಾಣೆಯಲ್ಲಿ ಮಾತುಕತೆ ಎಲ್ಲವೂ ನಡೆದಿತ್ತಾದರೂ ಪ್ರಯೋಜನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಇದರಿಂದ ನೊಂದ ಮಗಳನ್ನು ಮತ್ತೆ ವಾಪಸ್ ಗಂಡನೆ ಮನೆಗೆ ಕಳಿಸದೇ ತನ್ನ ಇನ್ನೊಬ್ಬಳ ಮಗಳ ಮನೆಗೆ ಕಳಿಸಿದ್ದರು. ಇದೇ ಕಾರಣಕ್ಕೆ ಮಾವನೊಂದಿಗೆ ಮುನಿಸಿಕೊಂಡಿದ್ದ ಅಳಿಯ ಈ ಕೃತ್ಯ ಎಸಗಿದ್ದಾನೆ ಅನ್ನುವ ಆರೋಪ ವ್ಯಕ್ತವಾಗಿದೆ.

ನ. 2ರಂದು ಈ ಘಟನೆ ನಡೆದಿದ್ದು ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಇಬ್ರಾಹಿಂ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದು ಮಂಗಳವಾರದಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.ಇಬ್ರಾಹಿಂ ಪುತ್ರ ಮುಹಮ್ಮದ್ ರಫೀಕ್ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ .ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

ಮುಹಮ್ಮದ್ ಶಾಫಿ ಈ ಮೊದಲು ವಿವಾಹವಾಗಿದ್ದು ಆಕೆಗೂ ಚಿತ್ರಹಿಂಸೆ ನೀಡುತ್ತಿದ್ದ ಪರಿಣಾಮ ಆತನನ್ನು ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ.

Leave a Reply