ಮಂಜೇಶ್ವರ ಸಮೀಪ ಯುವಕನನ್ನು ಕೊಲ್ಲಿಯಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿ ಮರಕ್ಕೆ ತೂಗುಹಾಕಿ ಕೊಲೆಗೈದ ಬಳಿಕ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಯಲ್ಲಿ ಉಪೇಕ್ಷಿಸಿ ಪರಾರಿಯಾದ ಪ್ರಕರಣದ ಸೂತ್ರಧಾರ ಪೈವಳಿಕೆ ನಿವಾಸಿ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕ್ಕರ್ ಸಿದ್ದಿಕ್ ಯಾನೆ ನೂರ್‌ಶ (33) ಮಂಜೇಶ್ವರ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಮಾಹಿತಿ ತಿಳಿಯಲಾಗಿದೆ.
ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈತನನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆಗೊಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
2022ರ ಜೂನ್ 26ರಂದು ಪುತ್ತಿಗೆಯ ಅಬೂಬಕರ್ ಸಿದ್ದಿಕ್ ಅವರನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದ ಪ್ರಕರಣದಲ್ಲಿ ನೂರ್‌ಶ ಕೂಡ ಒಳಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗುವುದರೊಂದಿಗೆ ಈತ ನೇಪಾಲಕ್ಕೆ ಪರಾರಿಯಾಗಿದ್ದ. ಕೆಲವು ತಿಂಗಳ ಹಿಂದೆ ಊರಿಗೆ ಬಂದಿದ್ದ. ಹೈಕೋರ್ಟ್‌ನಲ್ಲಿ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು ಎನ್ನಲಾಗಿದೆ.
ನಿರೀಕ್ಷಣ ಜಾಮೀನು ನಿರಾಕರಿಸಿದ ನ್ಯಾಯಾಲಯ ಹತ್ತು ದಿನಗಳೊಳಗೆ ಮಂಜೇಶ್ವರ ಠಾಣೆಯಲ್ಲಿ ಶರಣಾಗಬೇಕೆಂದು ನಿರ್ದೇಶಿಸಿತ್ತು. ಈ ಪ್ರಕರಣದಲ್ಲಿ 19 ಮಂದಿ ಆರೋಪಿಗಳಿದ್ದಾರೆ. ಈ ಹಿಂದೆ 12 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಒಟ್ಟು ಸಂಖ್ಯೆ 13 ಕ್ಕೇರಿದೆ.
ಮಂಜೇಶ್ವರ ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.