ಜೆರೋಸಾ ಶಾಲೆ ಪ್ರಕರಣದಲ್ಲಿ ಶಿಕ್ಷಣ ಇಲಾಖೆಯಿಂದ ತಪ್ಪಾಗಿದೆ – ರಮಾನಾಥ ರೈ

ಮಂಗಳೂರು : ರಾಜಕೀಯ ತಿರುವು ಪಡೆದುಕೊಂಡ ಜೆರೋಸಾ ಶಿಕ್ಷಣ ಇಲಾಖೆಯ ಪ್ರಕರಣ ಇಂದು ಶಾಲೆಗೆ ಕಾಂಗ್ರೆಸ್ ನಾಯಕರ ನಿಯೋಗ ಭೇಟಿ ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲು ಸತ್ಯಶೋಧನ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ರಮಾನಾಥ ರೈ ಒತ್ತಾಯಿಸಿದ್ದಾರೆ.

ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀರಾಮನಿಗೆ ಅವಹೇಳನ ಮಾಡಿದ ಪ್ರಕರಣವು ಬಿಜೆಪಿ ನಾಯಕರ ಎಂಟ್ರಿ ಮೂಲಕ ದೊಡ್ಡ ಪ್ರಚಾರ ಪಡೆದುಕೊಂಡ ಬಳಿಕ ಸತ್ಯಾಸತ್ಯತೆ ವಿಮರ್ಶೆ ತಿಳಿಯಲು ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಶಾಲೆಗೆ ಭೇಟಿನೀಡಿದೆ.

ಬಳಿಕ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಪರಿಶುದ್ಧವಾದ ಮಕ್ಕಳ ನಿಷ್ಕಲ್ಮಷ ಮನಸ್ಸನ್ನು ಪ್ರಚೋದನೆ ಮಾಡಿ ಬಳಸಬಾರದು. ಯಾರು ಬೇಕಾದರೂ ಮಾತನಾಡಲಿ ಮಕ್ಕಳನ್ನ ರಾಜಕೀಯಕ್ಕೆ ಬಳಸಬಾರದು, ಅದರ ಬಗ್ಗೆಯೂ ತನಿಖೆ ಆಗಲಿ. ಮಕ್ಕಳನ್ನು ದುರುಪಯೋಗ ಪಡಿಸಿಕೊಂಡಿದ್ದರೆ ಅದರ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ತನಿಖೆ ಮಾಡಲಿ. ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಸ್ವಲ್ಪ ತಪ್ಪಾಗಿದೆ ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾವು ಭೇಟಿಯಾಗಿದ್ದೇವೆ. ಸಂಬಂಧ ಪಟ್ಟ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡುತ್ತೇವೆ. ಎಲ್ಲವೂ ತನಿಖೆ ಆಗಲಿ, ಸರ್ಕಾರ ಸ್ವತಂತ್ರ ತನಿಖೆ ನಡೆಯಲಿ,ಸಾಮರಸ್ಯದ ರೀತಿಯಲ್ಲಿ ಇದನ್ನ ಮುಗಿಸಬೇಕು ತನಿಖೆ ಮೂಲಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಪಕ್ಷದ ಮುಖಂಡರಾದ ಜೆ ಆರ್ ಲೋಬೋ, ಮಮತಾ ಗಟ್ಟಿ, ಶಶಿಧರ್ ಹೆಗಡೆ, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಭಾಸ್ಕರ್ ಮೊಯ್ಲಿ, ವಿಶ್ವಾಸ್ ದಾಸ್ ನಿಯೋಗದಲ್ಲಿದ್ದರು.

Leave a Reply