ಉಳ್ಳಾಲ: ಗಾಂಜಾ ಮತ್ತಿನಲ್ಲಿ ಯುವಕನ ದಾಂಧಲೆ -ತಡೆಯಲು ಹೋದ ವ್ಯಕ್ತಿಯ ಮೇಲೆ ಹಲ್ಲೆ..!!

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದು ದಾಂಧಲೆ ನಡೆಸಿದ್ದು, ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದ ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.

ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ ಮದ್ಯಾಹ್ನದ ವೇಳೆ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ ಹಳಿಯಲ್ಲಿ ನಿಂತು ಹಳಿಗಳಲ್ಲಿದ್ದ ಜಲ್ಲಿ ಕಲ್ಲುಗಳನ್ನ ರಸ್ತೆಗೆ ಎಸೆಯಲಾರಂಭಿಸಿದ್ದಾನೆ. ಸಾರ್ವಜನಿಕರು, ಶಾಲಾ ಮಕ್ಕಳು ತೆರಳುತ್ತಿದ್ದ ರಸ್ತೆಗೆ ಕಲ್ಲೆಸೆಯುತ್ತಿದ್ದುದನ್ನು ಪ್ರಶ್ನಿಸಿ, ತಡೆಯಲು ಮುಂದಾದ ಸ್ಥಳೀಯ ನಿವಾಸಿ ರಾಜೇಶ್ ಶೆಟ್ಟಿ ಎಂಬವರ ತಲೆ ಮತ್ತು ಕೈಗೆ ಪಕ್ಕದ ಅಂಗಡಿಯಲ್ಲಿದ್ದ ಸೋಡಾ ಬಾಟಲಿಯಿಂದ ಮಿಸ್ತ ಹಲ್ಲೆಗೈದಿದ್ದಾನೆ. ಕೂಡಲೇ ಅಲ್ಲಿ ನೆರೆದಿದ್ದ ಸಾರ್ವಜನಿಕರು ದಾಂಧಲೆ ನಡೆಸುತ್ತಿದ್ದ ಮಿಸ್ತನನ್ನ ಹಿಡಿದು ಥಳಿಸಿ ಉಳ್ಳಾಲ ಪೊಲೀಸರಿಗೊಪ್ಪಿಸಿದ್ದಾರೆ. ಸೋಡಾ ಬಾಟಲಿ ಏಟಿನಿಂದ ತಲೆ ಮತ್ತು ಕೈಗೆ ಹಲ್ಲೆಗೊಳಗಾದ ರಾಜೇಶ್ ಶೆಟ್ಟಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಿಸ್ತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದು ಆತನ ವಿರುದ್ಧ ಸೂಕ್ತ ಕ್ರಮಕ್ಕಾಗಿ ರಾಜೇಶ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

Leave a Reply