ಮಲ್ಪೆ : ವೈದ್ಯ ಎಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ಪಂಗನಾಮ

ಮಲ್ಪೆ: ತಾನು ಲಂಡನ್‌ ವೈದ್ಯ ಎಂಬುದಾಗಿ ನಂಬಿಸಿ ಮಲ್ಪೆಯ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಂಕನಿಡಿಯೂರು ಗ್ರಾಮದ ವಿನೀತಾ (35) ಅವರು ಕಂಪೆನಿಯೊಂದರಲ್ಲಿ ಬಿಸಿನೆಸ್‌ ಪಾರ್ಟ್‌ನರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್‌ ಎಂಬದಾಗಿ ಪರಿಚಯ ಮಾಡಿಕೊಂಡು ವಾಟ್ಸಾಪ್‌ ಮೂಲಕ ಚಾಟ್‌ ಮಾಡುತ್ತಿದ್ದ. ಅನಂತರ ಆತನು ತಾನು ಲಂಡನ್‌ನಿಂದ ಭಾರತಕ್ಕೆ ಬರುವುದಾಗಿ ಹೇಳಿದ್ದನು. ವಿನೀತಾ ಅವರಿಗೆ ಬೇರೆ ಒಂದು ನಂಬರಿನಿಂದ ಕರೆ ಬಂದಿದ್ದು, ನಿಮ್ಮ ಸ್ನೇಹಿತ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಕಸ್ಟಡಿಯಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕಾದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾನೆ. ಸರಕಾರದಿಂದ ತಮ್ಮ ಮೇಲೆ ಕಾನೂನು ಕ್ರಮ ಆಗಬಹುದೆಂದು ಹೆದರಿ ವಿನೀತಾ ಹಣವನ್ನು ಪಾವತಿ ಮಾಡಿದರು. ಅವರು ಹೀಗೆ ಫೆಬ್ರವರಿ 16ರಿಂದ 20ರ ವರೆಗೆ ಒಟ್ಟು 4,96,000 ರೂ. ಹಣವನ್ನು ಕೆನರಾ ಬ್ಯಾಂಕ್‌ ಖಾತೆ ಮತ್ತು ಪೋನ್‌ಪೇ ಮೂಲಕ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply