October 26, 2025
WhatsApp Image 2023-10-11 at 2.52.28 PM

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಮತ್ತು ಅಧಿಕಾರಿಗಳು ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಆದಿವಾಸಿ ಕೊರಗ ಸಮುದಾಯದ ಬಗ್ಗೆ ಮಾನವೀಯ ನೆಲೆಯಿಂದ ಕಾರ್ಯಾಚರಿಸುವುದು ಸಂವಿಧಾನದ ಆಶಯವಾಗಿದೆ ಇದಕ್ಕೆ ವ್ಯತಿರಿಕ್ತವಾಗಿ ಕೊರಗ ಸಮುದಾಯದ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು

ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯ ಎದುರು ವಾಮಂಜೂರು ಮಂಗಳಜ್ಯೋತಿಯಲ್ಲಿ 2018ರಲ್ಲಿ ಮಂಗಳೂರು ನಗರ ಪಾಲಿಕೆ ಮಂಜೂರು ಮಾಡಿದ 33 ನಿವೇಶನ ರಹಿತ ಕೊರಗ ಕುಟುಂಬಗಳಿಗೆ ನಿವೇಶನ ಮತ್ತು ಭೂ ದಾಖಲೆ ಹಸ್ತಾಂತರ ಮಾಡದಿರುವುದನ್ನು ಖಂಡಿಸಿ ಸಂಘಟಿಸಲಾದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು,ಕೊರಗ ಸಮುದಾಯಕ್ಕಾಗಿ ಮೀಸಲಿರಿಸಿದ ಭೂಮಿ ಇದ್ದರೂ ಅದನ್ನು ನೀಡಲು ಮೀನಮೇಷ ಎಣಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಯ ಬುಡಕಟ್ಟು ವಿರೋಧಿ ಮನೋಸ್ಥಿತಿ ಜಗಜ್ಜಾಹೀರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ ಮಂಗಳೂರು ಮಹಾನಗರ ಪಾಲಿಕೆಯು ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ.ಇಲ್ಲಸಲ್ಲದ ಕಾರಣಗಳನ್ನು ಕೊಡುತ್ತಾ 5 ವರ್ಷ ನಿವೇಶನ ಮತ್ತು ಭೂ ದಾಖಲೆ ಹಸ್ತಾಂತರವನ್ನು ಮುಂದೂಡಿದ ಮಹಾನಗರ ಪಾಲಿಕೆಯ ಆಡಳಿತವು ಕಳೆದ ತಿಂಗಳು ನಡೆಸಿದ ಭೂಮಿ ಸಮಾವೇಶ ಮತ್ತು 18 ಕಿಲೋಮೀಟರ್ ಪಾದಯಾತ್ರೆಯ ನಂತರ ನಡೆದ ಜಂಟಿ ಸಭೆಯಲ್ಲಿ ಐದು ತಿಂಗಳ ಕಾಲಾವಧಿಯಲ್ಲಿ ಹಸ್ತಾಂತರಿಸುವುದಾಗಿ ಭರವಸೆ ನೀಡಿದೆ.ಈ ಅವಧಿಯಲ್ಲಿ ಕಣ್ಣಿಗೆ ಮಣ್ಣೆರೆಚುವ ತಂತ್ರದ ಭಾಗವಾಗಿ ಐದು ಬಾರಿ ಸರ್ವೆ ನಡೆಸಿ ಕಾಲ ಹರಣ ಮಾಡುತ್ತಿದೆ. ಆದುದರಿಂದ ಚಳುವಳಿಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗುವುದೆಂದು ಹೇಳಿದರು

ಪ್ರತಿಭಟನೆಯನ್ನು ಉದ್ದೇಶಿಸಿ DYFI ಜಿಲ್ಲಾ ಅಧ್ಯಕ್ಷರಾದ ಬಿಕೆ ಇಮ್ತಿಯಾಜ್,ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಐಟಿಯುವಿನ ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕಾನೂನು ಸಲಹೆಗಾರರಾದ ಮನೋಜ್ ವಾಮಂಜೂರು,ಆದಿವಾಸಿ ಸಮಿತಿಯ ಮಂಗಳ ಜ್ಯೋತಿ ಅಧ್ಯಕ್ಷರಾದ ಕರಿಯ.ಕೆ, ಹಾಗೂ ಪುನೀತ್ ರವರು ಮಾತನಾಡಿದರು.ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮಾರ್ಗದರ್ಶಕರಾದ ಯೋಗೀಶ್ ಜೆಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಶೇಖರ್ ಕೆ ವಾಮಂಜೂರು,ರಶ್ಮಿ ವಾಮಂಜೂರು,ವಿಜ್ಞೇಶ್, ಗಣೇಶ್, ವಿನೋದ್, ರಂಜಿತ್ ಇನ್ನ, ರವೀಂದ್ರ, ಲಿಖಿತ್, ಮಹಿಳಾ ಮುಖಂಡರಾದ ಮಂಜುಳಾ, ಪೂರ್ಣಿಕ, ತುಳಸಿ ಪಡುಬಿದ್ರಿ, ಜಯಚಿತ್ರ, ಕೃಷ್ಣ ಇನ್ನ, ಪೂರ್ಣೇಶ್ ವಹಿಸಿದ್ದರು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಪ್ರಶಾಂತ್ ಎಂಬಿ, ರಾಧಾಕೃಷ್ಣ ಪಾಂಡುರಂಗ, ಶಿವಾನಂದ, ಶಂಕರ್ ಮುದರಂಗಡಿ ,ಮಹಿಳಾ ಮುಖಂಡರಾದ ಅಸುಂತ ಡಿಸೋಜ,ಪ್ರಮೀಳಾ ಶಕ್ತಿನಗರ,ಪ್ರಮಿಳಾ ದೇವಾಡಿಗ DYFI ನಾಯಕರಾದ ರಫೀಕ್ ಬೆಂಗರೆ,ಇಬ್ರಾಹಿಂ ಮದಕ ಮುಂತಾದವರು ಭಾಗವಹಿಸಿದ್ದರು.

About The Author

Leave a Reply