Visitors have accessed this post 414 times.

ಕಾಂತರಾಜ್ ವರದಿ ಬಿಡುಗಡೆ, ಮುಸ್ಲಿಮ್ ಮೀಸಲಾತಿ ಶೇ.8ಕ್ಕೆ ಏರಿಸಿ: ಶಾಸಕ ಹರೀಶ್ ಕುಮಾರ್ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಮನವಿ

Visitors have accessed this post 414 times.

ಬೆಳ್ತಂಗಡಿ: ಕಾಂತರಾಜು ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದು ಮತ್ತು ಮುಸ್ಲಿಮರ 2 ಬಿ ಮೀಸಲತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಪಕ್ಷ ಶೇಕಡಾ 8ಕ್ಕೆ ಏರಿಸಲು ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಅವರ ನಿಯೋಗ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹರೀಶ್ ಕುಮಾರ್ ಅವರು ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕೋಶಾಧಿಕಾರಿ ಅಶ್ರಫ್ ಕಟ್ಟೆ ಉಪಸ್ಥಿತರಿದ್ದರು.

ಎಸ್‌ಡಿಪಿಐ ಮನವಿ ಪತ್ರದಲ್ಲಿ ಏನಿದೆ?

ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರ ಮತ್ತು ಆಸ್ತಿ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿರುತ್ತದೆ. ಅದೇ ನಿಟ್ಟಿನಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಮತ್ತು ಅವಕಾಶಗಳು ಸಿಗಬೇಕೆನ್ನುವ ಉದ್ದೇಶದಿಂದಲೇ ಯೋಜನೆಗಳನ್ನು ರೂಪಿಸಲು ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ವರ್ಷಗಟ್ಟಲೇ ರಾಜ್ಯದಾದ್ಯಂತ ಸಮೀಕ್ಷೆ ನಡೆಸಿ ಜಾತಿ ಮತ್ತಿತರ ಕಾರಣಗಳಿಂದಾಗಿ ತಮ್ಮ ಹಕ್ಕು ಅಧಿಕಾರಗಳಿಂದ ವಂಚಿತರಾಗಿ, ಹಲವು ರೀತಿಯಲ್ಲಿ ಶೋಷಣೆಗೊಳಗಾಗಿರುವ ಜಾತಿ ಸಮುದಾಯಗಳ ವಾಸ್ತವ ಸ್ಥಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತವಾದ ವರದಿ ನೀಡಿದೆ ಎಂದು ಆಯೋಗದ ಮುಖ್ಯಸ್ಥರೇ ಹೇಳಿಕೊಂಡಿದ್ದಾರೆ. ಸುಮಾರು 167 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿರುವ ಕಾಂತರಾಜ್ ಆಯೋಗದ ಸಮೀಕ್ಷಾ ವರದಿಯನ್ನು ಸ್ವೀಕರಿಸಲು ಸರ್ಕಾರವು ಸಲ್ಲದ ನೆಪ ಹೇಳಿಕೊಂಡು ಬರುತ್ತಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕಾಂತರಾಜ್ ವರದಿಯನ್ನು ಕೂಡಲೇ ಸ್ವೀಕರಿಸಿ ಸಾರ್ವಜನಿಕ ಗೊಳಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ.

ಪರಿಶಿಷ್ಟರ ಮೀಸಲಾತಿ ಹಂಚಿಕೆಯಲ್ಲಿ ನಾವು ಅಸ್ಪೃಶ್ಯರು ಎನ್ನುವ ಕಾರಣಕ್ಕೆ ನಮಗೆ ಅನ್ಯಾಯವಾಗಿದೆ. ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ನಮಗೆ ಒಳಮೀಸಲಾತಿ ಬೇಕು ಎನ್ನುವ ಪರಿಶಿಷ್ಟ ಜಾತಿಯ ಅಸ್ಪೃಶ್ಯ ಸಮುದಾಯಗಳ ಬೇಡಿಕೆಯ ಹೋರಾಟವು ಸುಮಾರು 30 ವರ್ಷಗಳ ಹೋರಾಟವಾಗಿರುತ್ತದೆ. ಈ ನಿಟ್ಟಿನಲ್ಲಿ ರಚನೆಯಾಗಿದ್ದ ಸದಾಶಿವ ಆಯೋಗವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿ ದಶಕವೇ ಆಗಿದೆ. ಆದರೇ ಆಡಳಿತ ಸರ್ಕಾರಗಳು ಒಳಮೀಸಲಾತಿ ಅನುಷ್ಠಾನಕ್ಕಾಗಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ, ಅಸ್ಪೃಶ್ಯ ಸಮುದಾಯಗಳ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಲೇ ಬರುತ್ತಿವೆ. ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಎಸ್‌ಡಿಪಿಐ ಒತ್ತಾಯಿಸುತ್ತದೆ.

ರಾಜ್ಯದಲ್ಲಿ ಸುಮಾರು 17% ಜನಸಂಖ್ಯೆ ಹೊಂದಿರುವ ಮುಸಲ್ಮಾನರಿಗೆ ಇದುವರೆಗೂ ಜಾರಿಯಲ್ಲಿದ್ದ 4% ಮೀಸಲಾತಿಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ BJP ಸರ್ಕಾರವು ರದ್ದು ಮಾಡಿತ್ತು. ಸರ್ಕಾರದ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಹೈ ಕೋರ್ಟ್ ತಡೆ ಹಿಡಿದಿದೆಯಾದರೂ ಮೀಸಲಾತಿ ಮುಂದುವರಿಕೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ. ಗೊಂದಲ ನಿವಾರಣೆಗಾಗಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ತಡ ಮಾಡುತ್ತಿರುವುದು ಮುಸಲ್ಮಾನರ ವಿರೋಧಿ ನಡೆಯನ್ನು ತೋರಿಸುತ್ತದೆ. ಸರ್ಕಾರದ ಇಂತಹ ಧೋರಣೆಯನ್ನು ನಾವು ಖಂಡಿಸುತ್ತೇವೆ ಮತ್ತು ಮುಸಲ್ಮಾನರ 2B ಮೀಸಲಾತಿ ಪ್ರಮಾಣವನ್ನು 4% ನಿಂದ 8% ಗೆ ಹೆಚ್ಚು ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಮೇಲ್ಕಂಡ ಮೂರು ವಿಚಾರಗಳ ಒತ್ತಾಯದ ಬಗ್ಗೆ ಡಿಸೆಂಬರ್ 4ನೇ ತಾರೀಖಿನಂದು ಬೆಳಗಾವಿಯ ಸುವರ್ಣ ವಿಧಾನಸೌದದಲ್ಲಿ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ತಾವು ಧ್ವನಿ ಎತ್ತಬೇಕು ಮತ್ತು ಪಟ್ಟು ಹಿಡಿದು ನಮ್ಮ ಬೇಡಿಕೆಗಳನ್ನು ಜಾರಿಗೊಳಿಸುವ ಒತ್ತಾಯವನ್ನು ಸರ್ಕಾರಕ್ಕೆ ಮಾಡುವ ಮೂಲಕ, ಸಂವಿಧಾನದ ನಿಜವಾದ ಆಶಯವಾದ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇವೆ.

Leave a Reply

Your email address will not be published. Required fields are marked *