Visitors have accessed this post 106 times.

ನ್ಯಾಯಾಲಯದ ಆದೇಶದಂತೆ ಅನರ್ಹಗೊಂಡ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ

Visitors have accessed this post 106 times.

ನ್ಯಾಯಾಲಯದ ಆದೇಶದಂತೆ ಅನರ್ಹಗೊಂಡ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ

ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ಮೂಲ ದಾವೆ 833/2019 ರಲ್ಲಿ ದಿನಾಂಕ 22.8.2022 ರಂದು ನೀಡಿದ ತೀರ್ಪಿನ ಮುಖಾಂತರ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಹುದ್ದೆಗೆ ನಡೆದ ಚುನಾವಣೆಯನ್ನು ಅಸಿಂಧುಗೊಳಿಸಿದೆ. ತತ್ಪರಿಣಾಮವಾಗಿ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಹುದ್ದೆಗಳು ಅಸ್ತಿತ್ವವನ್ನು ಕಳೆದುಕೊಂಡಿವೆ.

ಸದರಿ ತೀರ್ಪಿನ ವಿರುದ್ಧ ಮಂಗಳೂರಿನ ಮಾನ್ಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ ಮೇಲ್ಮನವಿ ಸಂಖ್ಯೆ ಆರ್‌.ಎ.91/2022 ರಲ್ಲಿ ಮಾನ್ಯ ಮೇಲ್ಮನವಿ ನ್ಯಾಯಾಲಯವು ದಿನಾಂಕ 17.11.2023 ರಂದು ನೀಡಿದ ತೀರ್ಪಿನ ಪ್ರಕಾರ ಪದಾಧಿಕಾರಿಗಳ ಚುನಾವಣೆಯನ್ನು ಅಸಿಂಧುಗಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ಸಂಘದ 2012 ರ ಬೈಲಾ ನಿಯಮ 40ಎ , ಹಾಗೂ 2022 ರಲ್ಲಿ ತಿದ್ದುಪಡಿಯಾದ ಬೈಲಾ ನಿಯಮ 12 ಬಿ ಯಡಿ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಈ ಮೂರು ಪದಾಧಿಕಾರಿ ಹುದ್ದೆಗಳು ತೆರವಾದಲ್ಲಿ ಚುನಾವಣೆಯ ಮೂಲಕ ಮಾತ್ರ ಭರ್ತಿ ಮಾಡತಕ್ಕದ್ದಾಗಿದೆ. ಸದರಿ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲು ಸಂಘದ ಬೈಲಾ ನಿಯಮಗಳಡಿ ಅವಕಾಶವಿಲ್ಲ.

ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಪದಾಧಿಕಾರಿಗಳ ಹುದ್ದೆಗಳು ಅಸ್ತಿತ್ವ ಕಳೆದುಕೊಂಡಿರುವುದರಿಂದ ಸದರಿ ಹುದ್ದೆಗಳಿಗೆ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆಯಾಗುವವರೆಗೆ ಸಂಘದ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಆಡಳಿತ ಅಧಿಕಾರಿಯವರನ್ನು ನೇಮಕ ಮಾಡಬೇಕಾಗಿ ಜಿಲ್ಲಾ ನೌಕರ ಸಂಘದ ನಿರ್ದೇಶಕರುಗಳ ನಿಯೋಗ ಮಾನ್ಯ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಕಾಶ್ ನಾಯಕ್, ಹಾಲಿ ನಿರ್ದೇಶಕರುಗಳಾದ ಪ್ರದೀಪ್ ಡಿಸೋಜಾ ಮತ್ತು ಅಕ್ಷಯ ಭಂಡಾರ್ಕರ್ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀ ಸಂತೋಷ್ ಕುಮಾರ್ ಅವರು ಮನವಿಯನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರಿಗೆ ಸಂಘದ ಆಡಳಿತ ಮಂಡಳಿ ನ್ಯಾಯಾಲಯದ ತೀರ್ಪಿನ ಮುಖಾಂತರ ಬರ್ಕಾಸ್ತುಗೊಂಡಿರುವುದರಿಂದ ಹಾಲಿ ಪದಾಧಿಕಾರಿಗಳ ಹುದ್ದೆ ತನ್ನಿಂದ ತಾನೇ ತೆರವಾಗಿರುತ್ತದೆ.
ಆದರೆ ನ್ಯಾಯಾಲಯದ ತೀರ್ಪಿನ ಅನ್ವಯ ಪದಾಧಿಕಾರಿಗಳ ಹುದ್ದೆಯಿಂದ ಅನರ್ಹಗೊಂಡ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರರಾದ ಪಿ‌.ಕೆ. ಕೃಷ್ಣ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾದ ನವೀನ್ ಕುಮಾರ್ ಎಂ.ಎಸ್. ಮತ್ತು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾದ ಗಣೇಶ್ ರಾವ್ ಎಂಬವರು ತಮ್ಮನ್ನು ತಾವೇ ಸಂಘದ ಅಧ್ಯಕ್ಷ , ಖಜಾಂಚಿ, ಹಾಗೂ ಕಾರ್ಯದರ್ಶಿ ಎಂಬುದಾಗಿ ಸ್ವಯಂ ಘೋಷಿಸಿಕೊಂಡು ಸಂಘದ ಸಂಪನ್ಮೂಲಗಳನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಈತನ್ಮಧ್ಯೆ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ ದಿನಾಂಕ 7.1.2024 ರಂದು ನಡೆಯುವ ಚುನಾವಣೆಗೆ ತನ್ನ ಅಸ್ತಿತ್ವ ಕಳೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಬಿತ್ತಿ ಪತ್ರಗಳನ್ನು ಮುದ್ರಿಸಿ ತಾವೇ ಸಂಘದ ಪದಾಧಿಕಾರಿಗಳು ಎಂಬುದಾಗಿ ಘೋಷಿಸಿ ಜಿಲ್ಲೆಯ ಪ್ರಜ್ಞಾವಂತ ಸರಕಾರಿ ನೌಕರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ನ್ಯಾಯಾಂಗ ಆದೇಶವನ್ನು ಧಿಕ್ಕರಿಸಿ ತಾವೇ ದ.ಕ. ಜಿಲ್ಲಾ ಸಂಘದ ಪದಾಧಿಕಾರಿಗಳು ಎಂದು ನಿರೂಪಿಸುವ ಸಲುವಾಗಿ ತಮ್ಮ ಭಾವಚಿತ್ರ ಇರುವ 2024 ನೇ ಇಸವಿಯ ಕ್ಯಾಲೆಂಡರ್ ಗಳನ್ನು ಮುದ್ರಿಸಿ, ಸಂಘದ ಲಕ್ಷಾಂತರ ರೂಪಾಯಿ ಹಣವನ್ನು ಪೋಲು ಮಾಡಿದ್ದಾರೆ.

ಶ್ರೀ ಪಿ.ಕೆ. ಕೃಷ್ಣ, ಶ್ರೀ ನವೀನ್ ಕುಮಾರ್ ಎಂ ಎಸ್ ಮತ್ತು ಶ್ರೀ ಗಣೇಶ್ ರಾವ್ ಎಂಬವರು ಸರಕಾರಿ ನೌಕರರ ಸಂಘದಲ್ಲಿ ನಡೆಸಿದ ಅವ್ಯವಹಾರವನ್ನು ಅವಗಾಹನೆಗೆ ತೆಗೆದುಕೊಂಡ ಮಾನ್ಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ತನ್ನ ತೀರ್ಪಿನಲ್ಲಿ (ಪುಟ ಸಂಖ್ಯೆ 30) ಸದರಿ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿದೆ. ಸದರಿ ವ್ಯಕ್ತಿಗಳು ಜಿಲ್ಲಾ ಸಂಘದ ಪದಾಧಿಕಾರಿ ಹುದ್ದೆಯ ತಮ್ಮ ಅಧಿಕಾರ ಕಳೆದುಕೊಂಡರೂ ಬ್ಯಾಂಕಿನ ಚೆಕ್ಕುಗಳಿಗೆ ಸಹಿ ಮಾಡಿ ಅಕ್ರಮವಾಗಿ ಹಣ ಸೆಳೆಯಲು ಅವಕಾಶ ಮಾಡಿಕೊಡುವುದು ಮಾನ್ಯ ನ್ಯಾಯಾಲಯದ ತೀರ್ಪಿಗೆ ಹಾಗೂ ಜಿಲ್ಲಾ ಸಂಘದ ಹಿತಾಸಕ್ತಿಗೆ ವಿರುದ್ಧವಾಗಿದೆ.

ಮೇಲ್ಕಾಣಿಸಿದ ವ್ಯಕ್ತಿಗಳ ಅವಧಿಯಲ್ಲಿ ಕಳೆದ ಐದು ವರ್ಷಗಳಿಂದ ಸಂಘದ ಮಹಾಸಭೆ ನಡೆದಿಲ್ಲ. ಲೆಕ್ಕ ಪತ್ರಗಳು ಪಾರದರ್ಶಕವಾಗಿಲ್ಲ. ಅವ್ಯವಸ್ಥಿತ ಹಾಗೂ ಅಸಮರ್ಥ ಆಡಳಿತದಿಂದ ಜಿಲ್ಲಾ ಸಂಘ ಹೊಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಳೆದುಕೊಳ್ಳುವಂತಾಗಿದೆ. ಸಂಘದ ಕಚೇರಿಯ ನೆಲಸಮ ಆದೇಶವನ್ನು ಮಂಗಳೂರಿನ ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರು ಹೊರಡಿಸಿದ್ದಾರೆ.

ಈ ಮೇಲ್ಕಾಣಿಸಿದ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾರ್ಷಿಕ ಅರ್ಧ ಕೋಟಿಗೂ ಹೆಚ್ಚಿನ ಆದಾಯ ಇರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಸಂಪನ್ಮೂಲ ಅಪವ್ಯಯವಾಗದಂತೆ ನೋಡಿಕೊಳ್ಳಲು ಹಾಗೂ ಸಂಘದ ಅಸ್ತಿತ್ವವನ್ನು ಉಳಿಸುವ ಸಲುವಾಗಿ ಜಿಲ್ಲಾ ಸಂಘಕ್ಕೆ ಹೊಸತಾಗಿ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಆಯ್ಕೆಯಾಗುವ ವರೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *