ರಾಜ್ಯದ ಆಡಳಿತ ಕೇಂದ್ರ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಮುಸ್ಲಿಂ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಜೆಜೆಆರ್ ನಗರದ ನಿವಾಸಿ ಶಾಯಿಸ್ತಾ ಬಾನು (48) ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಲೆ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಕೆಲಕಾಲ ವಿಧಾನಸೌಧ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಹಾಗೂ ದಂಪತಿಗಳ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ಆತಂಕ ಉಂಟುಮಾಡಿತ್ತು.
ಆತ್ಮಹತ್ಯೆಗೆ ಯತ್ನಿಸಿದ ಶಾಯಿಸ್ತಾ ದಂಪತಿಗೆ ಸೇರಿದ 3 ಕೋಟಿ ರೂ. ಕಟ್ಟಡವನ್ನು ಕೇವಲ 1.41 ಕೋಟಿ ರೂ.ಗೆ ಹರಾಜು ಹಾಕಲಾಗಿದೆ. ಉದ್ದೇಶಪೂರ್ವಕವಾಗಿ ನಮಗೆ ವಂಚಿಸಲು ಕಡಿಮೆ ಮೊತ್ತಕ್ಕೆ ಕಟ್ಟಡ ಹಾರಾಜು ಹಾಕಿಸಲಾಗಿದೆ. ನಮಗೆ ನ್ಯಾಯ ಕೊಡಿಸಬೇಕು ಎಂದು ದಂಪತಿ ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಗೆ ಅಲೆಯುತ್ತಿದ್ದೇವೆ. ನಮಗೆ ಜಮೀರ್ ಅವರು ನ್ಯಾಯ ಕೊಡಿಸಿಲ್ಲ. ಇದರಿಂದ ನಾವು ಅನ್ಯಾಯಕ್ಕೆ ಒಳಗಾಗಿದ್ದು, ನ್ಯಾಯ ಕೊಡಿಸುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ದಂಪತಿ ಪಟ್ಟು ಹಿಡಿದಿದ್ದರು.
ಶುಂಠಿ ಬೆಳೆಯಲು ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್ ನಿಂದ 2016ರಲ್ಲಿ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದೆವು. ಅಂದಿನಿಂದ ಈ ವರೆಗೆ ಬಡ್ಡಿ ಸೇರಿ 90 ಲಕ್ಷ ರೂ. ಮರು ಪಾವತಿಸಿದ್ದೇವೆ. ಆರ್ಥಿಕ ಸಮಸ್ಯೆ ಕಾರಣ ಬಡ್ಡಿ ದರ ಕಡಿಮೆ ಮಾಡಿಸಿಕೊಡುವಂತೆ ಸಚಿವ ಜಮೀರ್ ಅಹ್ಮರ್ ಅವರ ಬಳಿ ಹೋಗಿದ್ದೆವು.
ಕೊನೆಗೆ ಬ್ಯಾಂಕ್‌ನಿಂದ ನಮಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಕಟ್ಟಡವನ್ನು 1.41 ಕೋಟಿ ರೂ.ಗಳಿಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಶಾಯಿಸ್ತಾ ದಂಪತಿ ಪ್ರತಿಭಟಿಸಿದ್ದಾರೆ. ಕೊನೆಗೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ದಂತಪತಿಗಳನ್ನ ತಡೆದಿದ್ದಾರೆ.