
ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸುತ್ತಿದ್ದ ಇಬ್ಬರು ಹರಿಯಾಣ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮೂರು ಪ್ರಕರಣಗಳು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರ ತಂಡ ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಹರಿಯಾಣ ರಾಜ್ಯ ಬರ್ಸಿ ಜಟಾನ್‌ನ ಸಂದೀಪ್ (36), ಹರಿಯಾಣ ಔರಂಗನಗರದ ರವಿ (27) ಬಂಧಿತ ಆರೋಪಿಗಳಾಗಿದ್ದು ಇವರಿಂದ 21 ಸಾವಿರ ನಗದು, 217 ಎಟಿಎಂ ಕಾರ್ಡ್, ಪಿಒಎಸ್ ಯಂತ್ರ, 2 ಮೊಬೈಲ್ ಹಾಗೂ ಒಂದು ಮೋಟಾರ್ ಸೈಕಲ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.ಇವರು ಶಿರೂರು ಭಾಗದ ಎರಡು ಎಟಿಎಂ ಹಾಗೂ ಬೈಂದೂರಿನ ಒಂದು ಎಟಿಎಂ ಕೇಂದ್ರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ನೈಜ ಗ್ರಾಹಕರಿಗೆ ಹಣ ವಿಥ್ ಡ್ರಾ ಮಾಡಲು ಸಹಕಾರ ಮಾಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿ ಮೂರು ಕಡೆ ಒಟ್ಟು 2 ಲಕ್ಷದ 26 ಸಾವಿರ ಹಣ ಎಗರಿಸಿದ್ದರು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


