
ನವದೆಹಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಭೂಪೇಂದ್ರ ಯಾದವ್ ಸಮಕ್ಷಮದಲ್ಲಿ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.



ಇತ್ತ ಕಾಂಗ್ರೆಸ್‌ಗೆ ಕೈ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿ ಕಾಂಗ್ರೆಸ್ ಸೇರಿದ ಇದೇ ಶೆಟ್ಟರ್ ಇ ಮೇಲ್ ಮೂಲಕ ಕಾಂಗ್ರೆಸ್ MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟು ‘ಕೈ’ ತೊರೆದಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿರುವ ಜಗದೀಶ್ ಶೆಟ್ಟರ್ ಅವರು ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ದೆಹಲಿಯಿಂದಲೇ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಕರೆ ಮಾಡಿರುವ ಶೆಟ್ಟರ್ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ. ಇ-ಮೇಲ್ ಮೂಲಕ ಬೇಡ ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸೂಚಿಸಿದ್ದಾರೆ. ದೆಹಲಿಯಿಂದ ಖುದ್ದಾಗಿ ಬಂದು ಶೆಟ್ಟರ್ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.