ಕಾಂಗ್ರೆಸ್ ಹಿರಿಯ ಮುಖಂಡ ಪದ್ಮನಾಭ ನರಿಂಗಾನ‌ ಹೃದಯಾಘಾತದಿಂದ ನಿಧನ..!

ಉಳ್ಳಾಲ: ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ , ಕಾಂಗ್ರೆಸ್ ಹಿರಿಯ ದಲಿತ ಮುಖಂಡರಾದ ಪದ್ಮನಾಭ ನರಿಂಗಾನ(77) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸದಾ ಲವಲವಿಕೆಯಿಂದಿದ್ದ ಪದ್ಮನಾಭರಿಗೆ ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪರೂಪದ ಪ್ರಾಮಾಣಿಕ ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿದ್ದ ಪದ್ಮನಾಭ ಅವರು ಸಾಮಾನ್ಯ ಬಡತನದ ಕುಟುಂಬದಿಂದ ಬಂದು ತನ್ನ ಅಪರಿಮಿತ ಶ್ರಮ ಹಾಗೂ ಬದ್ಧತೆಯಿಂದ ಸಾಮಾಜಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು. ಎರಡು ಬಾರಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದರು‌.

ಕೈರಂಗಳ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಸ್ಥಳೀಯ ದೇವಸ್ಥಾನ, ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಜನಾನುರಾಗಿಯಾಗಿದ್ದರು. ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಈ (2023) ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಪದ್ಮನಾಭರಿಗೆ ಲಭಿಸಿತ್ತು. ಪದ್ಮನಾಭರ ಮಗ ಮೋಹನ್ ಅವರು ಸರಕಾರಿ ವಾಹನ ಚಾಲಕರು. ಮೋಹನ್ ಸ್ಪೀಕರ್ ಯು.ಟಿ.ಖಾದರ್ ಸಚಿವರಾಗಿದ್ದಾಗಲೂ ಅವರಿಗೆ ಚಾಲಕರಾಗಿದ್ದರು. ಈಗ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಕಾರು ಚಾಲಕರಾಗಿದ್ದಾರೆ. ಮಗ ಜಿಲ್ಲಾಧಿಕಾರಿಯ ಕಾರು ಚಾಲಕನಾದರೂ ಅದರ ಯಾವುದೇ ಲಾಭ ಪಡೆಯದ ಪದ್ಮನಾಭರು ಸಿಂಪಲ್ ಆಗಿದ್ದರು.

ಹಿಂದಿನ‌ ಕಮ್ಯೂನಿಸ್ಟ್ ಧುರೀಣ ಮಹಾಬಲೇಶ್ವರ ಭಟ್ಟರ ಪ್ರೇರಣೆಯಿಂದ ಕಮ್ಯೂನಿಸ್ಟ್ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿದ ಪದ್ಮನಾಭ ಅವರು ಅನೇಕ ವರ್ಷಗಳ ಕಾಲ ಸಿಪಿಐ ಪಕ್ಷದಲ್ಲಿ ಸಕ್ರಿಯವಾಗಿ ದುಡಿದವರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದರು. ನರಿಂಗಾನ ಕಂಬಳ ಸಮಿತಿಯ ಗೌರವ ಸಲಹೆಗಾರರೂ, ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಇದ್ದಾರೆ.

ಫೆ.8ರ ಗುರುವಾರ(ನಾಳೆ) ಬೆಳಗ್ಗೆ 10 ಗಂಟೆಗೆ ಪದ್ಮನಾಭರ ನರಿಂಗಾನದ ಸ್ವಗೃಹದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಬಳಿಕ ಅಂತ್ಯಕ್ರಿಯೆ ನಡೆಯಲಿದೆಯೆಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply