
ಬಂಟ್ವಾಳ: ಬಸ್ ಚಾಲಕನ ಹುಡುಕುತನದಿಂದ ಚಾಲನೆಯ ಪರಿಣಾಮ ಶಾಲಾ ವಿದ್ಯಾರ್ಥಿನಿಯೊರ್ವಳು ಬಸ್ ನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.



ಪಾಣೆಮಂಗಳೂರು ಗ್ರಾಮದ ಗುಡ್ಡೆಯಂಗಡಿ ನಿವಾಸಿ ಮೊಹಮ್ಮದ್ ರಫೀಕ್ ಅವರ ಮಗಳು ಅಪ್ಸನಾ ಬಸ್ ನಿಂದ ಕೆಳಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿನಿ.ಅಪ್ಸನಾ ಮೆಲ್ಕಾರ್ ನಲ್ಲಿ ಪ್ರಯಾಣಿಕಳಾಗಿ ಬಸ್ ಹತ್ತಿದ್ದು, ಬಿಸಿರೋಡಿಗೆ ತೆರಳಿದ್ದಳು.ಬೆಳಿಗ್ಗೆ ಸುಮಾರು 9.30 ಗಂಟೆಗೆ ಅಪ್ಸನಾ ಹೋಗುತ್ತಿದ್ದ ಬಸ್ ಕೆಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರು ತಲುಪಿದಾಗ ಚಾಲಕ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಬಸ್ಸ್ ನಿಂದ ಇಳಿಯಲು ಡೋರ್ ಬಳಿ ನಿಂತಿದ್ದ ವಿದ್ಯಾರ್ಥಿನಿ ಬಸ್ ನಿಂದ ಹೊರೆಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ಗಾಯವಾಗಿದೆ.
ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ತುಂಬೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.