
ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದು ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಸಮೀಪದ ಡಬಲ್ ಕಟ್ಟೆ ಎಂಬಲ್ಲಿ ನಡೆದಿದೆ.
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬಲ್ ಕಟ್ಟೆ ಸೀತಮ್ಮ ಅವರು ಮನೆಗೆ ಬಾಗಿಲು ಹಾಕಿ ಪಕ್ಕದ ಮನೆಗೆ ಹೋಗಿದ್ದರು.
ಇದೇ ವೇಳೆ ಮನೆಯೊಳಗೆ ಸದ್ದು ಕೇಳಿತ್ತೆಂದು ಮನೆಗೆ ಬಂದಾಗ ಇಬ್ಬರು ಕಳ್ಳರು ಮನೆಯೊಳಗೆ ಹಿಂದಿನ ಬಾಗಿಲಿನಿಂದ ನುಗ್ಗಿದ್ದು ಕಂಡು ಬಂತು. ಸೀತಮ್ಮ ಅವರಿಗೆ ಜೀವ ಬೆದರಿಕೆ ಒಡ್ಡಿ ದೂಡಿ ಹಾಕಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದಾರೆ. ಅವರು ಬೈಕ್‌ನಲ್ಲಿ ಬಂದಿದ್ದರು ಎಂದು ಅಂದಾಜಿಸಲಾಗಿದೆ.



ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಪುತ್ತೂರು ಡಿವೈಎಸ್ಪಿ, ಸುಳ್ಯ ವೃತ್ತ ನಿರೀಕ್ಷಕರು, ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.