Visitors have accessed this post 512 times.
ಮಂಗಳೂರು: ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಮೂರು ದಿನಗಳ ಬಳಿಕ ಉಪ್ಪಳ ಠಾಣಾ ವ್ಯಾಪ್ತಿಯ ಮೂಸೋಡಿಯಲ್ಲಿ ಸಮುದ್ರದಲ್ಲಿ ಬುಧವಾರ ಪತ್ತೆಯಾಗಿದೆ.
ಪೊರ್ಕೋಡಿ ನಿವಾಸಿ ವಿದ್ಯಾರ್ಥಿ ಲಿಖಿತ್ (18) ಮೃತದೇಹ ಪತ್ತೆಯಾಗಿದೆ. ಈತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಕುತ್ತಿಗೆಯಲ್ಲಿ ಚೈನ್, ಒಳ ಉಡುಪು ಆಧಾರದಲ್ಲಿ ಲಿಖಿತ್ ಎಂದು ಗುರುತಿಸಲಾಗಿದೆ.
ಲಿಖಿತ್ ಅವರ ಮೃತದೇಹವನ್ನು ಉಪ್ಪಳದ ಮೀನುಗಾರರು ದಡಕ್ಕೆ ತಲುಪಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರು ಮಂಗಲ್ಪಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಪಟ್ಟ ಪಣಂಬೂರು ಠಾಣೆಗೆ ಮಾಹಿತಿ ನೀಡಿದ್ದಾರೆ.
ಕಳೆದ ಭಾನುವಾರ ಪೊರ್ಕೋಡಿಯ ಸ್ನೇಹಿತರಾದ ನಾಗರಾಜ್ (24),ಮಿಲನ್ (20) ಹಾಗೂ ಲಿಖಿತ್ ಅವರು ಜನಪದ ಪರಿಷತ್ ರಸಮಂಜರಿ ಕಾರ್ಯಕ್ರಮ ವೀಕ್ಷಣೆಗೆಂದು ಬಂದಿದ್ದರು. ಬಳಿಕ ಸಮುದ್ರದಲ್ಲಿ ಅವರೆಲ್ಲರೂ ಈಜಾಟ ನಡೆಸುತ್ತಿದ್ದರು. ಈ ವೇಳೆ ಭಾರೀ ಗಾಳಿಯಿಂದಾಗಿ ಅಲೆಗಳು ಅಪ್ಪಳಿಸಿದ್ದು, ಮೂವರು ಮುಳುಗಿ ನಾಪತ್ತೆಯಾಗಿದ್ದರು. ತಕ್ಷಣ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಇನ್ನು ಮಾರ್ಚ್ 4ರಂದು ವಿದ್ಯಾರ್ಥಿಗಳಾದ ನಾಗರಾಜ್, ಮಿಲನ್ ಅವರ್ ಮೃತದೇಹ ಪಣಂಬೂರಿನಲ್ಲಿ ಪತ್ತೆಯಾಗಿತ್ತು.