ಬೆಳ್ತಂಗಡಿ: ಮಿತ್ತ ಬಾಗಿಲು ಗ್ರಾಮದ ಮಸೀದಿ ಬಳಿ ವ್ಯಕ್ತಿಗೆ ಹಲ್ಲೆ ದೂರು, ಪ್ರತಿದೂರು

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಮಸೀದಿ ಬಳಿ ತಂಡವೊಂದು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಸ್ಥಳೀಯ ನಿವಾಸಿ ಅಶ್ರಫ್ ಪಿ. ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಲೈಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿಗಳಾದ ಸಿನಾನ್ ಮತ್ತು ಅಬ್ದುರ್ರಹ್ಮಾನ್ ಎಂಬವರು ಕಿಟ್ ಹಂಚುವ ವಿಚಾರವಾಗಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರಲ್ಲದೆ ಕರೀಂ ಮತ್ತು ಚೆರಿಯಮೋನು ಎಂಬವರು ಹಲ್ಲೆ ನಡೆಸಿ ಗಾಯ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಶ್ರಫ್‌ ಆರೋಪಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಇದೇ ಘಟನೆಯ ಮುಂದುವರಿದ ಭಾಗವಾಗಿ ಸ್ಥಳೀಯ ನಿವಾಸಿ ಜೈನಾಬ್ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ತಾಲಿ ಉಮರ್, ಸಫಾನ್, ಸಿನಾನ್, ಆಸಿಫ್, ಹಕೀಂ, ಟಿ.ಎ.ಮುಹಮ್ಮದ್ ಎಂಬವರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ತನಗೆ ಹಾಗೂ ಅಣ್ಣ ಅಬ್ದುರ್ರಹ್ಮಾನ್ ಎಂಬವರ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ಹಲ್ಲೆಗೆ ಒಳಗಾದ ಮಹಿಳೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆನ್ನಲಾಗಿದ್ದು, ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply