ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸರಕಾರಿ ಬಸ್‌ನ ನಿರ್ವಾಹಕ ಯುವತಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಿನ್ನೆ ಸಂಭವಿಸಿದೆ.
ಯುವತಿ ಇಳಿಯಬೇಕಾದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಅನುಚಿತ ವರ್ತನೆ ತೋರಿದ ಅರೋಪದಲ್ಲಿ ಬಸ್ ನಿರ್ವಾಹಕನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಡಬ ತಾಲೂಕು ರಾಮಕುಂಜ ಸಮೀಪದ ಕುಂಡಾಜೆಯಲ್ಲಿ ಯುವತಿ ಬಸ್ ಏರಿದ್ದರು. ಆಲಂಕಾರಿಗೆ ಎಂದು ಯುವತಿ ಹೇಳಿದರೂ ಕಡಬಕ್ಕೆ ಟಿಕೆಟ್ ನೀಡಿ ಯುವತಿ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಕಡಬದತ್ತ ಬಸ್ ಹೊರಟಿತ್ತು ಎನ್ನಲಾಗಿದೆ. ತಾನು ಇಳಿಯುವ ಸ್ಥಳ ಬಂದಾಗ ಮೈಮುಟ್ಟಿ ಇಲ್ಲಿ ಇಳಿಯಬೇಡಿ ಎಂದು ನಿರ್ವಾಹಕ ಸೂಚಿಸಿದ್ದ ಎಂದು ಆರೋಪಿಸಲಾಗಿದೆ. ಬಸ್ ನಿಲ್ಲಿಸದೆ ಅನುಚಿತ ವರ್ತನೆ ತೋರಿದ ಬಗ್ಗೆ ಯುವತಿ ಪರಿಚಿತರಿಗೆ ಮಾಹಿತಿ ನೀಡಿದ ಹಿನ್ನೆಲೆ ಕಡಬ ಸಮೀಪದ ಕಳಾರ ಮಸೀದಿ ಬಳಿ ಬಸ್ಸನ್ನು ಭೀಮ್ ಆರ್ಮಿ ಸಂಘಟನೆಯ ಸದಸ್ಯರು ತಡೆದು ನಿಲ್ಲಿಸಿದ್ದರು.
ಬಳಿಕ ಠಾಣೆ ಬಳಿ ನಿಲ್ಲಿಸಲು ಸೂಚಿಸಿದ್ದರು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟು ನಿರ್ವಾಹಕನ್ನು ಠಾಣೆಗೆ ಕರೆದೊಯ್ದಿದ್ದಾರೆ.
ನಂತರದ ಬಸ್ ನಿರ್ವಾಹಕನಿಂದ ಮುಚ್ಚಳಿಕೆ ಬರೆಸಿಕೊಂಡು ಮುಂದೆ ಪ್ರಯಾಣಿಕರ ಜೊತೆ ಸಭ್ಯವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.