November 28, 2025
WhatsApp Image 2024-03-11 at 9.13.14 AM

ಉಡುಪಿ: ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿ ಹೆಬ್ರಿಯ ಪೇತ್ರಿಯಲ್ಲಿ ನಡೆದಿದೆ.

ಈ ಬಗ್ಗೆ ಹೆಬ್ರಿ ಪೇತ್ರಿ ನಿವಾಸಿ ಲವೀನಾ ಸ್ಟೆಫನಿ ಕ್ರಾಸ್ಟೊ (42) ಎಂಬುವವರು ದೂರು ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಮಿಹಿಯಾಲ್ ನೀಲ್ಗೆನ್ ಎಂಬ ವ್ಯಕ್ತಿ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು, ನಂತರ ವಾಟ್ಸಾಪ್ ನಲ್ಲಿ ಚಾಟಿಂಗ್ ನಡೆಸಿ ಸ್ನೇಹಿತನಾಗಿದ್ದ. 2024ರ ಫೆಬ್ರವರಿ 15ರಂದು ದೂರುದಾರರಿಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದಾನೆ. ಬಳಿಕ ದೂರುದಾರರಿಗೆ ದೆಹಲಿಯ ಪಾರ್ಸೆಲ್ ಆಫೀಸ್‌ನಿಂದ ಎಂಬುದಾಗಿ ಅಪರಿಚಿತ ವ್ಯಕ್ತಿ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಜರ್ಮನಿಯಿಂದ ಬಂದಿರುವ ಪಾರ್ಸೆಲ್ ನಲ್ಲಿ ಜ್ಯುವೆಲರಿ, ಯುರೋ ಕರೆನ್ಸಿ ಇದ್ದು, ಇದನ್ನು ಪಡೆಯಲು ಪಾರ್ಸೆಲ್ ಚಾರ್ಜ್‌, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಹಾಗೂ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಅದನ್ನು ನಂಬಿ ಅಪರಿಚಿತ ಸೂಚಿಸಿದಂತೆ ಬ್ಯಾಂಕ್ ಖಾತೆಗಳಿಗೆ, ಗೂಗಲ್ ಪೇ ಗಳಿಗೆ ಹಂತ ಹಂತವಾಗಿ ಒಟ್ಟು ರೂಪಾಯಿ 54,74,000 ರೂ. ಹಣವನ್ನು ಪಾವತಿಸಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರರು ಪಾವತಿಸಿದ ಲಕ್ಷಾಂತರ ರೂ. ಹಣವನ್ನು ಪಡೆದು ಆರೋಪಿಗಳು ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ಮರಳಿ ನೀಡದೇ ವಂಚಿಸಿರುವುದಾಗಿ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್ 66(ಸಿ), 66(ಡಿ) ಐ.ಟಿ. ಕಾಯಿದೆ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

About The Author

Leave a Reply