ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮಂಗಳೂರು ಕ್ಷೇತ್ರದಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ಸೀಟು ಲಭಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದ್ರೆ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ.
ಇಂದು( ಮಂಗಳವಾರ ) ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಮೊದಲ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಪ್ರಶ್ನೆಗೆ ‘ಅದ್ಯಾವುದೂ ಮಾಹಿತಿ ಇಲ್ಲ, 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ಆಗಿದೆ’ ಎಂದರು. ಅಪೇಕ್ಷಿತರ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಕುಳಿತು ನಿರ್ಧಾರ ಮಾಡುತ್ತಾರೆ. ಬಹುಶಃ ಇನ್ನು ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ಘೋಷಿಸುತ್ತಾರೆ ಎಂದು ತಿಳಿಸಿದರು.