ಮನೆಯ ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಹೆಡ್ ಮಾಸ್ಟರ್ಸ್ ಬಡಾವಣೆಯಲ್ಲಿ ನಡೆದಿದೆ.
ಅಪರಿಚಿತ ಯುವತಿಯನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ.
ಕಳೆದ 5-6 ದಿನಗಳ ಹಿಂದೆಯೇ ಯುವತಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆಯಾದ ಯುವತಿ ಓಡಿಶಾ ಮೂಲದ ಸಪನ್ ಕುಮಾರ್ ಜೊತೆಗಿದ್ದಳು. ಸದ್ಯ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವ ಸಪನ್ ಕುಮಾರ್ ನಾಪತ್ತೆಯಾಗಿದ್ದಾನೆ. ಯುವತಿಯನ್ನು ಕೊಲೆಗೈದು ನಾಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಶವದ ಪಕ್ಕದಲ್ಲೇ ಮದ್ಯದ ಬಾಟಲ್ ಪತ್ತೆಯಾಗಿದೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.