
ಮಂಗಳೂರು: ಪ್ರೀತಿಸುವಂತೆ ಹಿಂದೆ ಬಿದ್ದ ಕಿರಾತಕನೊಬ್ಬ ಯುವತಿಗೆ ಮುಖಮೂತಿ ನೋಡದೆ ಹಲ್ಲೆ ನಡೆಸಿ ಮಾರಣಾಂತಿಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರುವಂತೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅತ್ತಾವರ ನಿವಾಸಿ ಸಲ್ಮಾನ್(19) ಯುವತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದವನು. ಸಲ್ಮಾನ್ ಯುವತಿಗೆ ಕಳೆದೊಂದು ವರ್ಷದಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ.



ಮಾರ್ಚ್ 12ರಂದು ರಾತ್ರಿ ಯುವತಿ ನಮಾಜ್ ಮುಗಿಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ತಡೆದು ನಿಲ್ಲಿಸಿದ ಸಲ್ಮಾನ್ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂಗಿಗೆ ಜೋರಾಗಿ ಗುದ್ದಿದ್ದಾನೆ. ಅಲ್ಲದೆ ಬಲವಂತವಾಗಿ ಆಕೆಯನ್ನು ತನ್ನ ಸ್ಕೂಟರ್ ನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೆ ಆಗಲೂ ತಲೆಗೆ, ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವತಿಯನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈವರೆಗೆ ಆರೋಪಿ ವಿರುದ್ಧ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಆಗಿಲ್ಲ ಎಂದು ಯುವತಿಯ ಕುಟುಂಬಸ್ಥರ ಆರೋಪಿಸಿದ್ದಾರೆ.