
ಮಂಗಳೂರು: ಸಾರ್ವಜನಿಕರ ಕಡತ ವಿಲೇವಾರಿ ಆಗುತ್ತಿಲ್ಲ ಹಾಗೂ ಮಧ್ಯವರ್ತಿಗಳ ದರ್ಬಾರು ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಮೂಡ ಕಚೇರಿಗೆ ಲೋಕಾಯಕ್ತ ಮಾರ್ಚ್ 13ರಂದು ಸಂಜೆ ದಿಢೀರ್ ಭೇಟಿ ನೀಡಿ ರಾತ್ರಿ ಸುಮಾರು 18 ಗಂಟೆಗಳ ದೀರ್ಘಕಾಲ ಪರಿಶೀಲನೆ ನಡೆಸಿದೆ. ಈ ಪರಿಶೀಲನೆ ವೇಳೆ ಮೂಡಾ ಕಚೇರಿಯ ಅಧಿಕಾರಿಗಳಲ್ಲಿ ಮತ್ತು ಹಲವಾರು ವ್ಯಕ್ತಿಗಳಲ್ಲಿ ದೊಡ್ಡ ಪ್ರಮಾಣದ ಹಣವಿದೆ.



ಈ ಹಣ ಎಲ್ಲಿಂದ ಬಂತು ಎಂಬುದಕ್ಕೆ ಸೂಕ್ತ ಉತ್ತರ ದೊರಕಿಲ್ಲ. ಕಚೇರಿಯಲ್ಲಿ ಹಣದ ಬ್ಯಾಗ್ ಕೂಡಾ ಪತ್ತೆಯಾಗಿದೆ. ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಕುರಿತು ಹೇಳಿಕೊಂಡಿರುತ್ತಾರೆ. ಪರಿಶೀಲನೆ ಸಂದರ್ಭ ದೀರ್ಘಕಾಲದಿಂದ ವಿಲೇವಾರಿಯಾಗದ ಹಲವಾರು ಅರ್ಜಿದಾರರ ಕಡತಗಳು ಸಿಕ್ಕಿರುತ್ತದೆ.
ಅಧಿಕಾರಿಗಳು ಬ್ರೋಕರ್‌ಗಳೊಡನೆ ಫೋನ್ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿರುವುದಾಗಿ ಸಾಕ್ಷಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮೂಡ ಕಚೇರಿ ಜಾಲದ ಬಗ್ಗೆ ತನಿಖೆ ಮುಂದುವರೆದಿರುತ್ತದೆ. ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕರಾದ ಚಲುವರಾಜು ಬಿ., ಡಾ.ಗಾನ ಪಿ ಕುಮಾರ್, ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ.ಯವರು ಸಿಬ್ಬಂದಿಯೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.