ಮಂಗಳೂರು: ದ.ಕ.ಜಿಲ್ಲೆಯ ಸಂಸದರು ಕೆಲಸ ಮಾಡಲು ಅನ್ ಫಿಟ್ ಎಂದು ಬದಲಾಯಿಸಿದ್ದಾರೆ‌- ರಮಾನಾಥ ರೈ

ಮಂಗಳೂರು: ದ.ಕ.ಜಿಲ್ಲೆಯ ಹಾಲಿ ಸಂಸದರು ನಂಬರ್ 1 ಸಂಸದರು ಎಂದು ಹೇಳುತ್ತಿದ್ದರು. ಆದರೆ ಅವರು ಕೆಲಸ ಮಾಡಿಲ್ಲ ಎಂಬ ಕಾರಣಕ್ಕಾಗಿಯೇ ಇಲ್ಲಿನ ಜನತೆ ಬದಲಾವಣೆ ಬಯಸಿದ್ದರು. ಇದೀಗ ಬದಲಾಯಿಸಿದ್ದು, ಅವರು ಕೆಲಸ ಮಾಡಲು ಅನ್ ಫಿಟ್ ಎಂಬ ಕಾರಣಕ್ಕೆ. ಇದರಿಂದ ಬಿಜೆಪಿ ಜಿಲ್ಲೆಯಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟ ಎಂದು ಮಾಜಿ ಸಚಿವ ರಮಾನಾಥ ರೈಯವರು ನಳಿನ್ ಕುಮಾರ್ ಹೆಸರು ಹೇಳದೆ ಟಾಂಗ್ ನೀಡಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ನಿಂದ ದ.ಕ.ಜಿಲ್ಲೆಯ ಓರ್ವ ಉತ್ತಮ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಕೆಲ ಆರ್ಥಿಕ ಸದೃಢ ಪಕ್ಷಕ್ಕೆ ದೇಶದ ಕಾಳಜಿಗಿಂತ ಚುನಾವಣಾ ಕಾಳಜಿಯೇ ಹೆಚ್ಚು. ಆದ್ದರಿಂದ ಅವರು ಅಭ್ಯರ್ಥಿ ಘೋಷಣೆ ಬೇಗ ಮಾಡುತ್ತಾರೆ. ಅವರಿಗೆ ಅಭಿವೃದ್ಧಿ, ದೇಶದ ಭವಿಷ್ಯದ ಬಗ್ಗೆ ಚಿಂತನೆಯಿಲ್ಲ‌. ಇಂದು ದೇಶದ ಪ್ರಧಾನಿ ಹೆಚ್ಚು ಪ್ರಯಾಣ ಮಾಡಿ, ಭಾಷಣ ಮಾಡಿದರೆ ಅದು ಚುನಾವಣಾ ಭಾಷಣವೇ ಹೊರತು ದೇಶದ ಅಭಿವೃದ್ಧಿಗಲ್ಲ ಎಂದು ಹೇಳಿದರು. ಬಡವರು, ದುರ್ಬಲ ವರ್ಗದವರಿಗೆ ರಕ್ಷಣೆ ಇರುವುದು ಸಂವಿಧಾನದಿಂದ. ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಕಾಂಗ್ರೆಸ್ ಗೆ ಮತ ಹಾಕಬೇಕು. ಸಂವಿಧಾನದ ರಕ್ಷಣೆ ಮಾಡಿದರೆ, ಅದು ಜನರನ್ನು ರಕ್ಷಿಸುತ್ತದೆ. ಆದ್ದರಿಂದ ಮುಂದೆ ಬರುವ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ ಆಗಿದ್ದು, ಜನತೆ ಕಾಂಗ್ರೆಸ್ ಗೆ ಮತ ಚಲಾಯಿಸಬೇಕು ರಮಾನಾಥ ರೈ ಹೇಳಿದರು.

Leave a Reply