
ಏಪ್ರಿಲ್ 26 ಶುಕ್ರವಾರದಂದು ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML) ಮತ್ತು ಕೇರಳದ ಮುಸ್ಲಿಂ ಗುಂಪು ಮನವಿ ಮಾಡಿದೆ.



ಮುಸ್ಲಿಂ ಸಮುದಾಯದ ಪವಿತ್ರ ದಿನವಾದ ಶುಕ್ರವಾರ ಚುನಾವಣೆ ನಡೆಸುವುದರಿಂದ ಕೇರಳದ ಮತದಾರರಿಗೆ, ಚುನಾವಣಾ ಅಧಿಕಾರಿಗಳು ಮತ್ತು ಮತಗಟ್ಟೆ ಏಜೆಂಟರುಗಳಿಗೆ ಅನಾನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಶುಕ್ರವಾರವನ್ನು ಜುಮಾ ಎಂದು ಕರೆಯಲಾಗುತ್ತದೆ. ಇದು ಮುಸ್ಲಿಮರು ಮಸೀದಿಗಳಲ್ಲಿ ಸೇರುವ ದಿನವಾಗಿದೆ. ಇದರಿಂದ ಕೇರಳ ಮತ್ತು ತಮಿಳುನಾಡಿನಲ್ಲಿ ಮತದಾನಕ್ಕೆ ತೊಂದರೆಯಾಗಬಹುದು. ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.
IUML ಜೊತೆಗೆ, ಕೇರಳದ ಪ್ರಮುಖ ಮುಸ್ಲಿಂ ಸಂಘಟನೆಯಾದ ಸಮಸ್ತ ಕೇರಳ ಜಮಿಯ್ಯತ್ ಉಲ್ ಉಲಮಾ, ಶುಕ್ರವಾರದ ಚುನಾವಣೆಯಿಂದ ಮತದಾರರು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಆಗಬಹುದಾದ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇದು ಮತದಾರರ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಸಂಘಟನೆಯ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ಮತ್ತು ಪ್ರಧಾನ ಕಾರ್ಯದರ್ಶಿ ಕೆ. ಅಲಿಕುಟ್ಟಿ ಮುಸಲಿಯಾರ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಏಪ್ರಿಲ್ 26 ರಂದು ನಡೆಯಲಿರುವ ಮತದಾನವನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗವು ಶನಿವಾರ ಘೋಷಿಸಿದೆ.