Visitors have accessed this post 582 times.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಲಿಕಟ್ಟೆಯ ಸಮೀಪದ ಅಂಗನವಾಡಿ ಕೇಂದ್ರದ ಬೀಗ ಒಡೆದು ರಾತ್ರಿವೇಳೆ ನುಗ್ಗಿದ ಕಿಡಿಗೇಡಿಗಳು ಅವಾಂತರ ಮಾಡಿದ್ದಾರೆ.
ಹೀಗೆ ಒಳಗೆ ನುಗ್ಗಿದ ಕಿಡಿಗೇಡಿಗಳು ಅಂಗನವಾಡಿ ಕೇಂದ್ರದ ಮಕ್ಕಳಿಗೆಂದು ದಾಸ್ತಾನು ಇರಿಸಿದ್ದ ಮೊಟ್ಟೆಗಳನ್ನೇ ಆಮ್ಲೆಟ್ ಮಾಡಿ ತಿಂದಿದ್ದಾರೆ. ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದ ಬೀಗ ಒಡೆದಿರುವುದನ್ನು ಗಮನಿಸಿ ಅವರು ಒಳಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಅಂಗನವಾಡಿ ಒಳಗೆ ಯಾವುದೇ ಮೌಲ್ಯಯುತ ವಸ್ತುಗಳು ದೊರಕಿಲ್ಲ. ಆದ್ದರಿಂದ ಕತ್ರಿಮ ಖದೀಮರು, ಅಂಗನವಾಡಿಯ ಮಕ್ಕಳಿಗೆ ಸೇವಿಸಲು ಎಂದು ದಾಸ್ತಾನು ಇರಿಸಲಾಗಿದ್ದ ಮೊಟ್ಟೆಗಳನ್ನು ಒಡೆದು ಆಮ್ಲೆಟ್ ಮಾಡಿ ತಿಂದಿದ್ದಾರೆ. ಅಂಗನವಾಡಿಯಲ್ಲಿ ಗ್ಯಾಸ್ ಸ್ಟವ್ ಮೇಲಿದ್ದ ಪಾತ್ರೆಯ ಮೇಲೆ ಆಮ್ಲೆಟ್ ತುಣುಕು ಕಂಡು ಬಂದಿದೆ. ಇದರಿಂದ ಕಿಡಿಗೇಡಿಗಳು ಆಮ್ಲೆಟ್ ಮಾಡಿ ತಿಂದಿರುವುದು ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದ ಸಿಸಿ ಕ್ಯಾಮೆರಾವನ್ನು ಎಗರಿಸಿದ್ದಾರೆ. ಒಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ ಎನ್ನಲಾಗಿದೆ. ಪುತ್ತೂರು ಪೊಲೀಸರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.