
ಬೆಂಗಳೂರು : ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ಮೃತರನ್ನು ಉಡುಪಿ ಅಂಬಲಪಾಡಿ ಮೂಲದ ಸುಕನ್ಯಾ (58) ಜೊತೆ 28 ವರ್ಷದ ಅವಳಿ ಮಕ್ಕಳಾದ ನಿಖಿತ್ ಮತ್ತು ನಿಶ್ಚಿತ್ ಎಂದು ಗುರುತಿಸಲಾಗಿದೆ.



ಸುಕನ್ಯಾ ಪತಿ ಜಯಾನಂದ್ ಫ್ಯಾಕ್ಟರಿ ನಡೆಸುತ್ತಿದ್ದರು. ಕೊರೊನಾ ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಜಯಾನಂದ್ ಫ್ಯಾಕ್ಟರಿ ಬಂದ್ ಮಾಡಿದ್ದರು. ಜಯಾನಂದ್ ಸಾಕಷ್ಟು ಸಾಲ ಮಾಡಿದ್ದರಿಂದ ಸುಕನ್ಯಾ ಮನೆಯಲ್ಲಿ ಟ್ಯೂಷನ್ ಹೇಳಿಕೊಡುತ್ತಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ. ನಿಕಿತ್ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಮನೆಗೆ ಸಾಲಗಾರರು ಬರುತ್ತಿದ್ದರು.
ಹದಿನೈದು ವರ್ಷಗಳಿಂದ ಒಂದೇ ಮನೆಯಲ್ಲಿ ಕುಟುಂಬ ಬಾಡಿಗೆಗೆ ಇತ್ತು. ಕಳೆದ ಕೆಲ ತಿಂಗಳಿನಿಂದ ಬಾಡಿಗೆ ಕಟ್ಟಲು ಕುಟುಂಬ ಒದ್ದಾಡುತ್ತಿತ್ತು. ಹೀಗಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.