MBBS ಮುಗಿಸಬೇಕಾದ್ರೆ ಹಾಸ್ಟೆಲ್​ನಲ್ಲಿ ಹುಡುಗರ ಜತೆ ಇರಬೇಕಂತೆ! ವಿದೇಶದಲ್ಲಿ ಭಾರತೀಯ ಯುವತಿಯ ಗೋಳು

 ನಮ್ಮ ದೇಶದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಅವರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದವರೇ ಹೆಚ್ಚು. ಆದಾಗ್ಯೂ, ಉತ್ತಮ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗಲು ಇಷ್ಟಪಡುವ ವಿದ್ಯಾರ್ಥಿಗಳಿಗೆ ಅಲ್ಲಿನ ಪರಿಸ್ಥಿತಿಗಳು ಕೆಲವೊಮ್ಮೆ ಅನುಕೂಲಕರವಾಗಿರುವುದಿಲ್ಲ.

ಹಲವು ಭರವಸೆಗಳು ಮತ್ತು ಇತರ ಹಲವು ಸವಾಲುಗಳೊಂದಿಗೆ ವಿದೇಶಕ್ಕೆ ಕಾಲಿಟ್ಟು ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಭಾರತೀಯ ವಿದ್ಯಾರ್ಥಿಗಳು ಪ್ರತಿ ಹಂತದಲ್ಲೂ ಅಲ್ಲಿನ ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಸಲ್ಲದ ಒತ್ತಡ, ಕಿರುಕುಳಗಳಿಗೆ ಒಳಗಾಗಿ ವೈದ್ಯಕೀಯ ವ್ಯಾಸಂಗವನ್ನು ಮುಗಿಸದೆ ಭಾರತಕ್ಕೆ ಬರಲಾಗದೇ ಒದ್ದಾಡುತ್ತಿದ್ದಾರೆ. ಅದೇ ರೀತಿ ವಿದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿನಿ ಕೂಡ ಇತ್ತೀಚೆಗೆ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾಳೆ. ಮೇಲಾಗಿ ಆ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕಾದರೆ ಗಂಡು ಮಕ್ಕಳ ಜೊತೆ ಇರಲೇಬೇಕಂತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯುವತಿಯೊಬ್ಬಳು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯೆಯಾಗಿ ಬದುಕು ಕಟ್ಟಿಕೊಳ್ಳಲು ಬಯಸಿದ್ದಳು. ಎಷ್ಟೇ ಬೆಲೆ ತೆತ್ತಾದರೂ ಮಗಳನ್ನು ವೈದ್ಯಳನ್ನಾಗಿ ನೋಡಬೇಕು ಎಂದು ಹೆತ್ತವರು ಕಾತರರಾಗಿದ್ದರು. ಅದಕ್ಕಾಗಿ ನಗರ ಮೂಲದ ಕನ್ಸಲ್ಟೆನ್ಸಿ ಮೂಲಕ ಕಜಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದರು. ಸಾಕಷ್ಟು ಭರವಸೆಯೊಂದಿಗೆ ವಿದೇಶಿ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಆ ವಿದ್ಯಾರ್ಥಿನಿಗೆ ಕಿರುಕುಳ ಶುರುವಾಯಿತು. ಇದಲ್ಲದೆ, ವಿದ್ಯಾರ್ಥಿನಿಯು ಹಾಸ್ಟೆಲ್‌ನಲ್ಲಿ ಹುಡುಗರೊಂದಿಗೆ ವಾಸಿಸುವುದು ಸೇರಿದಂತೆ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ.

ಪ್ರಕರಣದ ವಿವರಣೆಗೆ ಬರುವುದಾದರೆ, ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮಡ್ಡಿಲಪಾಲೆಂನ ಜಿ.ಭವಾನಿ ಎಂಬಾಕೆ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಲು ಯೋಚಿಸಿದ್ದರು. ಇದಕ್ಕಾಗಿ ಗಜುವಾಕದಲ್ಲಿರುವ ಜಿವಿಕೆ ಕನ್ಸಲ್ಟೆನ್ಸಿ ಎಂಬ ಕಂಪನಿಯನ್ನು ಸಂಪರ್ಕಿಸಲಾಗಿತ್ತು. ಅದರ ಮೂಲಕ ಕಜಕಿಸ್ತಾನದ ಅಲ್ಮಾಟಿ ನಗರದ ಕ್ಯಾಸ್ಪಿಯನ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಸೀಟು ಪಡೆದರು. ಇದಕ್ಕಾಗಿ ಸಾಕಷ್ಟು ಹಣ ಸಹ ಖರ್ಚು ಮಾಡಿದರು. ಅಲ್ಲದೇ ಅಲ್ಲಿನ ವಸತಿ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿನಿಯ ತಂದೆ ಜಗದೀಶ್ ಅವರು ಕನ್ಸಲ್ಟೆನ್ಸಿಯ ಪ್ರತಿನಿಧಿಗಳೊಂದಿಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಹುಡುಗಿಯರು ಮತ್ತು ಹುಡುಗರಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿವೆ ಎಂದು ಹೇಳಿದ್ದರಿಂದ ಮೆಡಿಕಲ್​ ಸೀಟಿಗಾಗಿ ಜಗದೀಶ್​ ಅವರು ಹಣ ಪಾವತಿಸಿದರು. ಭವಾನಿ ಇದೇ ತಿಂಗಳ 11ರಂದು ಕಜಕಿಸ್ತಾನಕ್ಕೆ ಹೋಗಿದ್ದರು. ಆದರೆ, ಅವರು ಹೇಳಿದ್ದೊಂದು ಮಾಡಿದ್ದೊಂದು. ಏಕೆಂದರೆ, ವಿಶ್ವವಿದ್ಯಾನಿಲಯದಲ್ಲಿ ಒಂದೇ ಕಟ್ಟಡದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ವಸತಿಯನ್ನು ಒದಗಿಸಲಾಗಿದೆ.

ಪರಿಸ್ಥಿತಿ ಸುಧಾರಿಸಬಹುದೇನೋ ಅಂದುಕೊಂಡು ಕೆಲ ದಿನಗಳ ಕಾಲ ಅಲ್ಲಿನ ಪರಿಸ್ಥಿತಿಗೆ ಭವಾನಿ ಹೊಂದಿಕೊಂಡರು. ಆದರೆ, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಅಲ್ಲದೆ, ಹುಡುಗರು ಧೂಮಪಾನ, ಮದ್ಯಪಾನ ಸೇರಿದಂತೆ ಇನ್ನಿತರ ಕೆಟ್ಟ ಕೆಲಸಗಳಲ್ಲಿ ತೊಡಗಿರುವುದನ್ನು ಕಣ್ಣಾರೆ ಕಂಡ ಭವಾನಿಗೆ ಅದನ್ನು ಸಹಿಸಲಾಗಲಿಲ್ಲ. ತಕ್ಷಣ ತನ್ನ ತಂದೆಗೆ ಫೋನ್​ ಮಾಡಿ ಈ ವಿಷಯವನ್ನು ತಿಳಿಸಿದ್ದಾಳೆ. ಈ ಕುರಿತು ಭವಾನಿ ತಂದೆ ಜಗದೀಶ್ ಕನ್ಸಲ್ಟೆನ್ಸಿ ಪ್ರತಿನಿಧಿಗಳನ್ನು ಸಂಪರ್ಕಿಸಿದರು. ಮಗಳನ್ನು ಬೇರೆ ಹಾಸ್ಟೆಲ್​ಗೆ ಶಿಫ್ಟ್ ಮಾಡುವಂತೆ ಕೇಳಿಕೊಂಡರು. ಆದರೆ, ಇದಾದ ಸ್ವಲ್ಪ ಸಮಯದ ನಂತರ ಕೆಲವು ಹಿರಿಯ ಹುಡುಗರು ಭವಾನಿಯ ಕೋಣೆಗೆ ಹೋಗಿ, ಎಂಬಿಬಿಎಸ್ ಪೂರ್ಣಗೊಳಿಸಬೇಕಾದರೆ ಅವರನ್ನು ಭೇಟಿಯಾಗಬೇಕು ಎಂದು ಎಚ್ಚರಿಸಿದ್ದಾರೆ. ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾಗಿ ವಸತಿ ಕಲ್ಪಿಸಲಾಗಿದೆ ಎಂದು ಒತ್ತಾಯಪೂರ್ವಕವಾಗಿ ಭವಾನಿ ಕೈಯಲ್ಲಿ ಆಕೆಯ ತಂದೆಗೆ ಹೇಳಿಸಿದ್ದಾರೆ.

ಆದರೆ, ಅಲ್ಲಿನ ವಾತಾವರಣ ಸಹಿಸಲಾಗದೆ ಭವಾನಿ ತನ್ನನ್ನು ಮನೆಗೆ ಕಳುಹಿಸುವಂತೆ ಕಾಲೇಜಿನಲ್ಲಿ ಮನವಿ ಮಾಡಿದರು. ಆದರೆ ಸಂಪೂರ್ಣ ಶುಲ್ಕ ಪಾವತಿಸಿದರೆ ಮಾತ್ರ ವಾಪಸ್ ಕಳುಹಿಸುತ್ತೇವೆ ಎಂದು ಪಾಸ್ ಪೋರ್ಟ್ ನೀಡದೆ ಕಿರುಕುಳ ನೀಡಲಾರಂಭಿಸಿದ್ದಾರೆ. ಹೀಗಾಗಿ ಈ ವಿಷಯವನ್ನು ತಂದೆ ಜಗದೀಶ್‌ಗೆ ತಿಳಿಸಿದ್ದಾಳೆ. ಅಲ್ಲದೆ, ಹಾಸ್ಟೆಲ್‌ನಲ್ಲಿ ಪರಿಸ್ಥಿತಿ ಸರಿಯಿಲ್ಲ ಎಂದು ಎಲ್ಲವನ್ನು ವಿವರಿಸಿ, ಅಧಿಕಾರಿಗಳ ಬಳಿ ಸಹಾಯ ಕೋರಿ ಸೆಲ್ಫಿ ವಿಡಿಯೋ ರೆಕಾರ್ಡ್​​ ಮಾಡಿ ತಂದೆಗೆ ಕಳುಹಿಸಿದ್ದಾಳೆ. ಈ ಬಗ್ಗೆ ತಂದೆ ಜಗದೀಶ್ ಗಾಜುವಾಕ ಪೊಲೀಸರಿಗೆ ದೂರು ನೀಡಿದ್ದು, ಮಗಳನ್ನು ಹೇಗಾದರೂ ಮಾಡಿ ಮತ್ತೆ ವಿಶಾಖಪಟ್ಟಣಕ್ಕೆ ಕರೆತರುವ ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ

Leave a Reply