Visitors have accessed this post 414 times.
40 ಕೆಜಿ ಗಾಂಜಾ ದಾಸ್ತಾನು ಪ್ರಕರಣದಲ್ಲಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಅಹಮದ್ ಸಾಬೀತ್, ಅದ್ದು @ ಅಬ್ದುಲ್ ಖಾದರ್, ಮಹಮ್ಮದ್ ಅನ್ಸಾರ್ ಖುಲಾಸೆಗೊಂಡ ಆರೋಪಿಗಳು.
ಪ್ರಕರಣದ ವಿವರ :- 2020 ಅ.8 ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮದ್ದ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ಮೂರು ಆರೋಪಿಗಳು ಕಾಂತಡ್ಕ ನಿವಾಸಿ ಮೊಹಮ್ಮದ್ ಇರ್ಷಾದ್ ನ ಹಣಕಾಸಿನ ನೆರವಿನಿಂದ ಅಕ್ರಮವಾಗಿ ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಖರೀದಿಸಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅವಿನಾಶ್ ಎಚ್ ಗೌಡ ಅವರು ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದಿಂದ ಸರ್ಚ್ ವಾರಂಟನ್ನು ಪಡೆದು ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳ ಮೂಲಕ ದಾಳಿಯನ್ನು ನಡೆಸಿ ಒಂದನೇ ಆರೋಪಿ ಅಹಮದ್ ಸಾಬೀತ್ ನನ್ನು ಬಂಧಿಸಿ ಸುಮಾರು 39.948 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಈ ಸಂದರ್ಭದಲ್ಲಿ ಮೂರನೇ ಆರೋಪಿ ಮೊಹಮ್ಮದ್ ಅನ್ಸಾರ್ ಓಡಿ ತಪ್ಪಿಸಿಕೊಂಡಿರುತ್ತಾನೆ. ಅದರ ನಂತರ ಎರಡನೇ ಆರೋಪಿ ಅದ್ದು ಯಾನೆ ಅಬ್ದುಲ್ ಖಾದರ್ ನನ್ನು ವಶಕ್ಕೆ ಪಡೆದು ಆತನಿಂದ 38 ಗ್ರಾಂ ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು .
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದೆ. ವಶಪಡಿಸಿಕೊಂಡ ವಸ್ತುವನ್ನು ರಾಸಾಯನಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಯಲ್ಲಿ ಗಾಂಜಾ ಎಂದು ದೃಢಪಟ್ಟಿದೆ. ಆದರೆ ಈ ಪ್ರಕರಣದಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಪ್ರಕಾರ ಸರಿಯಾದ ಕ್ರಮವನ್ನು ಅನುಸರಿಸಲಿಲ್ಲ ಹಾಗೂ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರೊಸಿಕ್ಯುಷನ್ ವಿಫಲವಾಗಿದೆ ಎಂದು ಮನಗಂಡು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ ಜೋಶಿ ಅವರು ಪ್ರಕರಣದ ಮೂರು ಆರೋಪಿಗಳನ್ನು ಖುಲಾಸಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಎರಡನೆಯ ಆರೋಪಿ ಅದ್ದು @ ಅಬ್ದುಲ್ ಖಾದರ್ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ನ ವಕೀಲರಾದ ಓಮರ್ ಫಾರೂಕ್ ಮುಲ್ಕಿ, ಆಶ್ರಫ್ ಅಗ್ನಡಿ, ಮಹಮ್ಮದ್ ಅಸ್ಗರ್ ಮುಡಿಪು, ಹೈದರ್ ಕಿನ್ನಿಗೋಳಿ ಇವರು ವಾದ ಮಂಡಿಸಿದ್ದರು.