ಉಪ್ಪಿನಂಗಡಿ ಸಮೀಪ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್ (35) ಎಂದು ತಿಳಿಯಲಾಗಿದೆ.
ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಅವರು ಮುಳುಗಿದರು. ಆಗ ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಆಸುಪಾಸಿನ ಮಂದಿ ಧಾವಿಸಿ ಬಂದು ಹಗ್ಗದ ಸಹಾಯದಿಂದ ನದಿ ನೀರಿಗಿಳಿದು ಅವರನ್ನು ಮೇಲೆತ್ತಿ ತಂದು ಪ್ರಥಮ ಚಿಕಿತ್ಸೆಯ ಬಳಿಕ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.