Visitors have accessed this post 632 times.

ಕಡಬ: ಮನೆಯೊಂದರಲ್ಲಿ ಕಳ್ಳತನ- ಇಬ್ಬರು ಕಳ್ಳರು ಅಂದರ್

Visitors have accessed this post 632 times.

ಕಡಬ: ಎರಡು ವಾರಗಳ ಹಿಂದೆ ನಡೆದಿದ್ದ ರಾಮಕುಂಜ ಗ್ರಾಮದ ಗೋಳಿತ್ತಡಿಯ ನೆಬಿಸಾ ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣ ಭೇದಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಾದತ್‌ ಆಲಿ ಫರಂಗಿಪೇಟೆ (30) ಹಾಗೂ ಹಮೀದ್‌ ವಳಚ್ಚಿಲ್‌(31) ಬಂಧಿತ ಆರೋಪಿಗಳು.
ಆರೋಪಿಗಳು ಮಾ. 11ರಂದು ರಾಮಕುಂಜ ಗ್ರಾಮದ ನೆಬಿಸಾ ಅವರ ಮನೆಯ ಹಿಂಬಾಗಿಲಿನ ಕಬ್ಬಿಣದ ಶಟರ್‌ ಮುರಿದು, ಬೀಗ ತೆಗೆದು ಕೊಠಡಿಯಲ್ಲಿದ್ದ 8 ಕಪಾಟುಗಳಲ್ಲಿ ನಗದು ಹಾಗೂ ಚಿನ್ನಕ್ಕೆ ಜಾಲಾಡಿದ್ದರು.
ಈ ಪೈಕಿ ನೆಬಿಸಾ ಅವರ ರೂಮ್‌ನ ಕಪಾಟಿನಲ್ಲಿದ್ದ 1.08 ಲಕ್ಷ ರೂ. ನಗದು ಹಾಗೂ 13 ಪವನ್‌ ಚಿನ್ನಾಭರಣ ಕಳವು ಮಾಡಿದ್ದರು. ಅದರಲ್ಲಿ 24 ಗ್ರಾಂ.ತೂಕದ 2 ಚಿನ್ನದ ಬಳೆ, 20ಗ್ರಾಂ. ತೂಕದ ಚಿನ್ನದ ನಕ್ಲೇಸ್‌ ಸರ, 20ಗ್ರಾಂ. ತೂಕದ ಚಿನ್ನದ ಸರ, 12ಗ್ರಾಂ ತೂಕದ 6 ಚಿನ್ನದ ಉಂಗುರಗಳು, 28 ಗ್ರಾಂ.ತೂಕದ ಒಂದು ಚಿನ್ನದ ಬ್ರಾಸ್ಲೆಟ್‌ ಇತ್ತು. ಅದರ ಒಟ್ಟು ಮೌಲ್ಯ 5.20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ನೆಬಿಸಾ ಅವರ ಪುತ್ರ ಸಿದ್ದಿಕ್‌ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೆಬಿಸಾ ಅವರು ಮಗಳು ನಸೀಮಾ, ಅಳಿಯ ನಾಸೀರ್‌ ಹಾಗೂ ಮಕ್ಕಳೊಂದಿಗೆ ಮಾ.7ರಂದು ಮನೆಗೆ ಬೀಗ ಹಾಕಿ ನಸೀಮಾ ಅವರ ಹೆರಿಗೆಗಾಗಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ತೆರಳಿದ್ದರು. ಮಾ. 11ರಂದು ಮಧ್ಯಾಹ್ನ 3.30ರ ವೇಳೆಗೆ ನೆಬಿಸಾ ಸಂಬಂಧಿಕರಾಗಿದ್ದ ಫಾಯಿಸಾ ಅವರು ಈ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.
ನೆಬಿಸಾ ಅವರ ಎದುರಿನ ಮನೆಯವರ ಸಿಸಿಟಿವಿಯಲ್ಲಿ ಮಾ. 11ರ ಮುಂಜಾನೆ 2.30ರ ವೇಳೆಗೆ ಕಾರಿನಲ್ಲಿ ಬಂದವರು ನೆಬಿಸಾ ಅವರ ಮನೆಗೆ ಹೋಗಿ ಅಲ್ಲಿಂದ ಸುಮಾರು ಹೊತ್ತಿನ ಬಳಿಕ ಬಂದು ಮತ್ತೆ ಕಾರಿನಲ್ಲಿ ತೆರಳಿರುವ ದೃಶ್ಯ ಸೆರೆಯಾಗಿತ್ತು.
ನೆಬಿಸಾ ಮನೆಗೆ ಬೀಗ ಹಾಕಿರುವ ಬಗ್ಗೆ ಹಮೀದ್‌ ಇತರ ಆರೋಪಿಗಳಿಗೆ ಮಾಹಿತಿ ನೀಡಿದ್ದ ಎಂದು ಹೇಳಲಾಗಿದೆ. ವಳಚ್ಚಿಲ್‌ ನಿವಾಸಿಯಾಗಿರುವ ಹಮೀದ್‌ಗೆ ಕುಂತೂರಿನಿಂದ ಮದುವೆಯಾಗಿದ್ದು ಮದುವೆಯ ಬಳಿಕ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಹಮೀದ್‌ ಸೇರಿ ಇಬ್ಬರು ನೆಬಿಸಾ ಅವರ ಮನೆಗೆ ಕಟ್ಟಿಗೆ ತುಂಡರಿಸಲು ಬಂದಿದ್ದರು. ಈ ವೇಳೆ ಹಮೀದ್‌ ನೆಬಿಸಾರ ಮನೆಯವರ ಹಾಗೂ ಮನೆಯ ಪರಿಚಯ ಮಾಡಿಕೊಂಡಿದ್ದ. ಮನೆಯವರೆಲ್ಲರೂ ಬೀಗ ಹಾಕಿ ಹೋಗಿರುವುದನ್ನು ತಿಳಿದುಕೊಂಡಿದ್ದ ಹಮೀದ್‌ ಫರಂಗಿಪೇಟೆಯ ಸ್ನೇಹಿತರಿಗೆ ಮಾಹಿತಿ ನೀಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಇತರ ಆರೋಪಿಗಳೊಂದಿಗೆ ಕಳವಿಗೆ ಕಾರಿನಲ್ಲಿ ಬಂದಿದ್ದ ಹಮೀದ್‌ ಕಾರಿನಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.
ಬಂಧಿತ ಇನ್ನೋರ್ವ ಆರೋಪಿ ಸಾದತ್‌ ಆಲಿ ವಿರುದ್ಧ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿವೆ.

Leave a Reply

Your email address will not be published. Required fields are marked *