ಮಂಗಳೂರು: ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಅಭ್ಯರ್ಥಿ ಬ್ರಿಜೇಶ್ ಚೌಟ ಪರವಾಗಿ ಬಿಜೆಪಿ ಮೀನುಗಾರ ಪ್ರಕೋಷ್ಟವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ.
ಮೊಗವೀರರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಮೂಲಕ ಮತೀಯ ದ್ವೇಷವನ್ನು ಹುಟ್ಟು ಹಾಕಿ ಚುನಾವಣೆಯಲ್ಲಿ ರಾಜಕೀಯ ಲಾಭ ಗಿಟ್ಟಿಸುವ ಯತ್ನ ನಡೆಸಿರುತ್ತಾರೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.
ಬಿಜೆಪಿ ನಾಯಕರ ರಾಜಕೀಯ ದುರುದ್ಧೇಶದ ಪರಸ್ಪರ ಎತ್ತಿಕಟ್ಟುವ ಮಾತುಗಳು ಖಂಡನೀಯ. ಮೇಯರ್ ಸುಧೀರ್ ಶೆಟ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಚುನಾವಣಾ ಆಯೋಗವು ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿರುವುದು ಹಿಂದೂ-ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟುವ ಮೂಲಕವಾಗಿದೆ. ಈ ಚುನಾವಣೆಯಲ್ಲಿ ಹೇಳಿಕೊಳ್ಳಲು ಯಾವುದೇ ಸಾಧನೆಯಿಲ್ಲದ ಬಿಜೆಪಿ ಹಾಗೂ ಅದರ ಅಭ್ಯರ್ಥಿ ಬ್ರಿಜೇಶ್ ಚೌಟ ಅದೇ ಮತೀಯ ದ್ವೇಷದ ಅಜೆಂಡಾವನ್ನು ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಮೀನುಗಾರಿಕೆ ಉದ್ಯಮದಲ್ಲಿ ಪರಸ್ಪರ ಅನ್ಯೋನ್ಯತೆಯಲ್ಲಿ ತೊಡಗಿಸಿಕೊಂಡಿರುವ ಮೊಗವೀರ ಹಾಗೂ ಮುಸ್ಲಿಮರ ಮಧ್ಯೆ ಒಡಕು ಮೂಡಿಸಲು ಕೊಳಕು ಮಾತುಗಳನ್ನು ಆಡಿದ್ದಾರೆ. ಮುಸ್ಲಿಮರಿಗೆ ಮೀನು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೇಯರ್ ಕರೆ ನೀಡಿರುವುದು ಅಕ್ಷಮ್ಯ. ಇದು ಚುನಾವಣಾ ಪೂರ್ವದಲ್ಲಿ ದ್ವೇಷದ ವಾತಾವರಣ, ಹಿಂಸಾಚಾರ ಉಂಟು ಮಾಡುವ ಯತ್ನವಾಗಿದೆ. ಸೋಲಿನ ಭೀತಿಯಿಂದ ಬಿಜೆಪಿ ಇಂತಹ ಅಪಾಯಕಾರಿ ರಾಜಕಾರಣವನ್ನು ಮಾಡುತ್ತಿದೆ ಎಂದು ಯಾದವ ಶೆಟ್ಟಿ ಆರೋಪಿಸಿದ್ದಾರೆ.
ಮೇಯರ್ ಸುಧೀರ್ ಶೆಟ್ಟಿಯ ಈ ದ್ವೇಷ ಭಾಷಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು,� ಮೇಯರ್ ಸುಧೀರ್ ಶೆಟ್ಟಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.