ಮಂಗಳೂರು : ದ.ಕ.ಜಿಲ್ಲೆಯ ಸುಳ್ಯ ಕಸಬಾ ಗ್ರಾಮದ ಶಾಂತಿ ನಗರದಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಲಾರಿ, ಕ್ರೇನ್ ಸಹಿತ ನಾಲ್ವರು ವಶಕ್ಕೆ ತೆಗೆದುಕೊಂಡಿದೆ.
ಶಾಂತಿನಗರ ನಿವಾಸಿ ಕೆ.ವೆಂಕಪ್ಪ ನಾಯ್ಕ, ಮರದ ವ್ಯಾಪಾರಿ ಹಳೆಗೇಟಿನ ರಿಫಾಯಿ ಬಿನ್ ಕುನ್ಹಿಪ್ಪ, ಕ್ರೇನ್ ಚಾಲಕ ಈಶ್ವರ್ ನಾಯ್ಕ ಜಯನಗರ, ಲಾರಿ ಚಾಲಕ ಹಾಸನದ ಚಂದ್ರೇಗೌಡ ಬಂಧಿತ ಆರೋಪಿಗಳು. ಶಾಂತಿನಗರದ ವೆಂಕಪ್ಪ ನಾಯ್ಕರ ಜಮೀನಿನಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಮಾಹಿತಿ ಅರಣ್ಯ ಇಲಾಖೆಗೆ ತಿಳಿದು ಬಂದಿದೆ. ತಕ್ಷಣ ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯ ಪಿ. ಎನ್. ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಈ ವೇಳೆ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲು ಬಳಸಿದ ಲಾರಿ, ಕ್ರೇನ್ ಹಾಗೂ 7.946 ಘ. ಮೀ. ಉದ್ದದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ವಾಹನ ಮತ್ತು ಸೊತ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.