November 8, 2025
WhatsApp Image 2024-03-31 at 2.02.22 PM

ಬಂಟ್ವಾಳ: ವಂಚನೆ ಆರೋಪ ಎದುರಿಸುತ್ತಿದ್ದ ಯುವಕನೋರ್ವನ ಮೃತದೇಹ ಬಂಟ್ವಾಳದ ವಾಮದಪದವಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕನದ್ದು ಆತ್ಮಹತ್ಯೆ ಎನ್ನಲಾಗುತ್ತಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಯುವಕನ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ ಆತ್ಮಹತ್ಯೆ ಮಾಡಿಕೊಂಡ ಯುವಕ.

ಪದ್ಮನಾಭ ಸಾಮಂತನ ವಿರುದ್ಧ ಕಳೆದರಡು ದಿನಗಳ ಹಿಂದೆ ವಂಚನೆ ಆರೋಪ ಕೇಳಿ ಬಂದಿದೆ. ಯುವಕನೋರ್ವನಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ 1.50 ಲಕ್ಷ ಹಣವನ್ನು ಪಡೆದು ವಂಚಿಸಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಮೃತ ಯುವಕ ಪದ್ಮನಾಭ ಸಾಮಂತ ವಿಚಾರಣೆಗೆ ಹಾಜರಾಗುವುದಾಗಿ ಪೋಲೀಸರಿಗೆ ತಿಳಿಸಿದ್ದ. ಆದರೆ ಯುವಕ ಕಳೆದ ಮೂರು ದಿನಗಳಿಂದ ಠಾಣೆಗೆ ಹಾಜರಾಗಿರಲಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿತ್ತು.

ಯಾರ ಸಂಪರ್ಕಕ್ಕೂ ಸಿಗದೆ, ನಾಪತ್ತೆಯಾಗಿದ್ದ ಯುವಕನ ಮೃತದೇಹ ಇದೀಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯ ಪಕ್ಕದ ಗುಡ್ಡವೊಂದರಲ್ಲಿ ಪತ್ತೆಯಾಗಿದೆ. ಪೋಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಪೋಲಿಸ್ ಪ್ರಾಥಮಿಕ ಮಾಹಿತಿ ಪ್ರಕಾರ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಆದರೆ ನಿಜಾಂಶವೇನು ಎನ್ನುವುದು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದುಬರಬೇಕಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪದ್ಮನಾಭ ಸಾಮಂತ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

About The Author

Leave a Reply